ಹೈದರಾಬಾದ್, ಎ.23 (Daijiworld News/MB) : ಕೊರೊನಾ ಲಾಕ್ಡೌನ್ ಮಧ್ಯೆ ಹಂದಿಗಳ ಗುಂಪು 4 ವರ್ಷದ ಬಾಲಕನನ್ನು ಕೊಂದು ತಮ್ಮ ಆಹಾರವನ್ನಾಗಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಹೈದರಾಬಾದ್ನ ಸೈಬಬಾದ್ ನಿವಾಸಿ ವಿ. ಹರ್ಷವರ್ಧನ್ ಎಂದು ಗುರುತಿಸಲಾಗಿದೆ.
ಮಂಗಳವಾರ ಬಾಲಕ ಸಂಜೆ 4 ಗಂಟೆ ಸುಮಾರಿಗೆ ತನ್ನ ಮನೆಯ ಸಮೀಪದಲ್ಲಿರುವ ನಿರ್ಜನ ಪ್ರದೇಶಕ್ಕೆ ಆಟವಾಡಲೆಂದು ತೆರಳಿದ್ದು ಈ ಸಂದರ್ಭದಲ್ಲಿ ಹಂದಿಗಳ ಗುಂಪೊಂದು ದಾಳಿ ಮಾಡಿ ಬಾಲಕನನ್ನು ಎಳೆದೊಯ್ದು ತಿಂದಿದೆ.
ಅರೆ ತಿಂದ ರಕ್ತಸಿಕ್ತವಾಗಿದ್ದ ಬಾಲಕನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಆ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ಆ ಪ್ರದೇಶದಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಂದಿಗಳನ್ನು ಬೇರೆಡೆಗೆ ಸಾಗಾಟ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಮಾಹಿತಿ ನೀಡಿದ ಸೈಬಬಾದ್ ಠಾಣಾಧಿಕಾರಿ ಕೆ. ಶ್ರೀನಿವಾಸ್, ಹಂದಿ ಗುಂಪು ಬಾಲಕನನ್ನು ಕೊಂದು ಹಾಕಿದ್ದು ಬಾಲಕನ ದೇಹದ ಒಂದು ಭಾಗವನ್ನು ತಿಂದು ಹಾಕಿದೆ ಎಂದು ತಿಳಿಸಿದ್ದಾರೆ.