ನವದೆಹಲಿ, ಏ 23 (Daijiworld News/MSP): ಲಾಕ್ಡೌನ್ನ ಮೊದಲ ಹಂತದಲ್ಲಿ ದೇಶದಲ್ಲಿ ಸುಮಾರು 12 ಕೋಟಿ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿರುವ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇಂತಹ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ಪ್ರತಿ ಕುಟುಂಬಕ್ಕೆ ಕನಿಷ್ಠ 7,500 ರೂ.ಗಳ ತಕ್ಷಣದ ಹಣಕಾಸಿನ ನೆರವು ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೊದಲ ಹಂತದ ಲಾಕ್ ಡೌನ್ ನಲ್ಲಿಯೇ, ಸುಮಾರು 12 ಕೋಟಿಗೂ ಹೆಚ್ಚು ಜನರ ಉದ್ಯೋಗ ನಷ್ಟವಾಗಿದ್ದು, ಲಾಕ್ ಡೌನ್ ವಿಸ್ತರಣೆ ಹಾಗೂ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ನಿರುದ್ಯೋಗವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಬಿಕ್ಕಟ್ಟನ್ನು ಎದುರಿಸಲು ಪ್ರತಿ ಕುಟುಂಬಕ್ಕೆ ಕನಿಷ್ಠ 7,500 ರೂ.ಗಳನ್ನು ನೀಡಲೇಬೇಕಾದ ಅನಿವಾರ್ಯತೆ ಇದೆ. ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿದ್ದು ತಮ್ಮೂರಿಗೆ ತಲುಪಲು ಸಾಧ್ಯವಾಗದೆ ಹತಾಶರಾಗಿದ್ದಾರೆ. ಅವರ ಬದುಕಿಗೆ ತೀವ್ರ ಹೊಡೆತ ಬಿದ್ದಿದ್ದು ಈ ಬಿಕ್ಕಟ್ಟಿನ ಅವರನ್ನು ಹೊರತರಲು ತಕ್ಷಣ ಆಹಾರ ಭದ್ರತೆ ಮತ್ತು ಆರ್ಥಿಕ ಸುರಕ್ಷತೆಯನ್ನು ಒದಗಿಸಬೇಕು "ಎಂದು ಅವರು ಹೇಳಿದರು.
ಲಾಕ್ ಡೌನ್ ದ್ವಿತೀಯ ಹಂತ ಹಾಗೂ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ನಿರುದ್ಯೋಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಉಳಿವಿಗಾಗಿ ವಿಶೇಷ ಪ್ಯಾಕೇಜ್ ಅನ್ನು ತುರ್ತಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಘೋಷಿಸಿರುವ ಆಹಾರ ಧಾನ್ಯಗಳ ಸಮರ್ಪಕವಾಗಿ ತಲುಪಿಲ್ಲ ಎಂದು ಅವರು ಆರೋಪಿಸಿದರು. ಲಾಕ್ಡೌನ್ ಕೊನೆಗೊಳ್ಳುವ ಮೇ 3 ರ ನಂತರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಲಾಗುವುದು ಎಂಬುದರ ಕುರಿತು ಕೇಂದ್ರ ಸರ್ಕಾರವು "ಸ್ಪಷ್ಟ" ಪರಿಕಲ್ಪನೆ ರೂಪಿಸಿಲ್ಲ, ಮೇ. ೩ ರ ನಂತರ ಪ್ರಸ್ತುತ ಇರುವ ಲಾಕ್ ಡೌನ್ ಸ್ಥಿತಿಗಿಂತಲೂ ಇನ್ನಷ್ಟು ವಿನಾಶಕಾರಿಯಾಗಿದೆ" ಎಂದು ಅವರು ಹೇಳಿದರು.