ಸೀತಾಪುರ್, ಏ 23 (Daijiworld News/MSP): 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹಾಗೂ ಅದನ್ನು ಚಿತ್ರೀಕರಣ ಮಾಡಿದ ಘೋರ ಘಟನೆ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಕೃತವೆಸಗಿದ ಇಬ್ಬರು ಯುವಕರು ಹಾಗೂ ಕೃತ್ಯಕ್ಕೆ ಸಹಕರಿಸಿದ ಇತರ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಸ್ರಿಖ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದೆ.
ಸಂತ್ರಸ್ತೆ ಬಾಲಕಿ ಬಹಿರ್ದೆಸೆಗೆ ಹೋಗಿ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ 6 ಮಂದಿ ಯುವಕರು ಬಲವಂತವಾಗಿ ಕರೆದೊಯ್ದು ಶಾಲಾ ಕಟ್ಟಡವೊಂದರ ಬಳಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಲ್.ಆರ್. ಕುಮಾರ್ ಹೇಳಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಸ್ಥಳೀಯರಾಗಿದ್ದು ಇವರು ಆಕೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ರೆ , ಇತರ ನಾಲ್ವರು ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿದ್ದರು. ಆರು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಗ್ಗೆ ಯಾರಲ್ಲೂ ಬಾಯ್ಬಿಡದಂತೆ ಆರೋಪಿಗಳು ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದರು. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.