ನಾಗಪುರ, ಎ.23 (Daijiworld News/MB) : ಖಾಸಗಿ ಸುದ್ದಿ ವಾಹಿನಿಯೊಂದರ ಸಂಪಾದಕ ಮತ್ತು ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಸಮಿಯಾ ಗೋಸ್ವಾಮಿ ನಡೆದ ದಾಳಿಯಲ್ಲಿ ಕಾಂಗ್ರೆಸ್ನ ಪಾತ್ರವಿಲ್ಲ, ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಕಾಂಗ್ರೆಸ್ ಯಾವತ್ತೂ ಕೂಡಾ ಈ ರೀತಿ ದಾಳಿಗಳನ್ನು ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿಗೆ ಮಸಿ ಬಳಿಯಲೆಂದು ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಇಂಧನ ಸಚಿವ ಡಾ. ನಿತಿನ್ ರಾವತ್ ಹೇಳಿದ್ದಾರೆ.
ಅರ್ನಾಬ್ ಗೋಸ್ವಾಮಿ ಅವರು ಟಿ.ವಿಯ ಆ್ಯಂಕರ್ ಆಗಿರಲು ಯೋಗ್ಯರೇ ಅಲ್ಲ, ಅವರು ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಸಭ್ಯ ಪದಗಳನ್ನು ಬಳಸಿ ಅವರು ಅವಮಾನ ಮಾಡಿದ್ದಾರೆ. ಇದು ಅವರು ಒಬ್ಬ ಮಹಿಳೆಗೆ ಮಾಡಿದ ಅವಮಾನವಲ್ಲಿ ಬದಲಾಗಿ ಈ ದೇಶಕ್ಕೆ ಮಾಡಿದ ಅವಮಾನ. ಹೀಗೆಲ್ಲಾ ಬಾಯಿಗೆ ಬಂದಂತೆ ಮಾತಡಲು ಅರ್ನಾಬ್ ಅವರಿಗೆ ಯಾರು ಅಧಿಕಾರ ಕೊಟ್ಟದು ಎಂದು ಪ್ರಶ್ನಿಸಿದರು.
ನಾವು ಅರ್ನಾಬ್ ಅವರ ಮಾತುಗಳನ್ನು ಖಂಡನೆ ಮಾಡುತ್ತೇವೆ. ಸೋನಿಯಾ ಗಾಂಧಿ ವಿರುದ್ದ ಅರ್ನಾಬ್ ಅವರು ಅಸಭ್ಯವಾಗಿ ಆಡಿದ ಮಾತುಗಳ ವಿಚಾರವಾಗಿ ಎಡಿಟರ್ ಗಿಲ್ಡ್’ಗೆ ದೂರು ನೀಡುತ್ತೇವೆ. ಅವರ ಮಾತುಗಳು ಪ್ರಚೋಧನಕಾರಿ ಎಂದು ತಿಳಿಸಿದರು.
ಅರ್ನಾಬ್ ಅವರ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ ಎಂದು ಅರ್ನಾಬ್ ಅವರು ಪೊಲೀಸರಿಗೆ ದೂರು ನೀಡದ್ದು ಈ ಸಂಬಂಧ ಇಬ್ಬರ ಬಂಧನ ಮಾಡಲಾಗಿದೆ. 2002ರಲ್ಲಿ ಅರ್ನಾಬ್ ಅವರು ಇದೇ ರೀತಿ ಆರೋಪ ಮಾಡಿದ್ದು ಬಳಿಕ ಅದು ಸುಳ್ಳು ಆರೋಪ ಎಂದು ತಿಳಿದು ಬಂದಿತ್ತು.