ನವದೆಹಲಿ, ಎ.23 (Daijiworld News/MB) : ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಜನರಲ್ಲರನ್ನು ಒಗ್ಗೂಡಿಸುವ ಅಗತ್ಯವಿರುವಾಗ ಬಿಜೆಪಿಯು ದ್ವೇಷ ಮತ್ತು ಕೋಮು ಪಕ್ಷಪಾತದ ವೈರಸ್ ಹರಡುತ್ತಿದೆ ಎಂದು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ಇದು ಕೊರೊನಾದ ವಿರುದ್ಧ ಹೋರಾಟಕ್ಕೆ ಎಲ್ಲರೂ ಒಂದಾಗ ಬೇಕಾದ ಸಮಯ, ಆದರೆ ಬಿಜೆಪಿಯು ಈ ಸಂದರ್ಭದಲ್ಲೂ ಜನರಲ್ಲಿ ದ್ವೇಷ ಮತ್ತು ಕೋಮು ಪಕ್ಷಪಾತದ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಲ್ಗಾರ್ನಲ್ಲಿ ಸಾಧುಗಳ ಮೇಲೆ ಜನಸಮೂಹ ಸೇರಿ ಹಲ್ಲೆ ನಡೆಸಿ ಹತ್ಯೆಗೈದದನ್ನು ಒಂದು ಸಮೂದಯ ಮಾಡಿದ ಹಲ್ಲೆಯಂತೆ ಬಿಂಬಿಸುವ ಯತ್ನ ನಡೆಯುತ್ತಿದ್ದು ಅದು ಸತ್ಯಕ್ಕೆ ದೂರವಾದುದ್ದು ಎಂದು ಅವರು ಹೇಳಿದರು.
ನಾವು ಈ ಸಂದರ್ಭದಲ್ಲಿ ಕೆಲವು ನಿದರ್ಶನಗಳನ್ನು ಶ್ಲಾಘನೆ ಮಾಡಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಸುರಕ್ಷತೆ ಇಲ್ಲದಿದ್ದರೂ ಕೊರೊನಾ ವಿರುದ್ಧ ಹೋರಾಡುವ ಪ್ರತಿಯೊಬ್ಬ ಭಾರತೀಯರಿಗೂ ನಾವು ನಮಸ್ಕರಿಸಬೇಕು ಎಂದು ತಿಳಿಸಿದರು.
ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಮತ್ತು ಅಗತ್ಯ ಸೇವಾ ಪೂರೈಕೆದಾರರು, ಎನ್ಜಿಒಗಳು ಮತ್ತು ಲಕ್ಷಾಂತರ ನಾಗರಿಕರು ಭಾರತದಾದ್ಯಂತ ನಿರ್ಗತಿಕರಿಗೆ ಸೇವೆ ನೀಡುತ್ತಿದ್ದಾರೆ. ಅವರ ಈ ಸಮರ್ಪಣಾ ಮನೋಭಾವ ನಮಗೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ಲಾಕ್ಡೌನ್ನ ಮೊದಲ ಹಂತದಲ್ಲಿ ಸುಮಾರು 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದನೆ ಮಾಡಿದ ಸೋನಿಯಾ ಗಾಂಧಿಯವರು ಈ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ಪ್ರತಿ ಕುಟುಂಬಕ್ಕೂ ತಕ್ಷಣದ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಲಾಕ್ಡೌನ್ ಸಂಬಂಧಿಸಿದಂತೆ ಕಳೆದ ಮೂರು ವಾರಗಳಲ್ಲಿ ಎರಡು ಬಾರಿ ಕಾಂಗ್ರೆಸ್ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದೆ.