ಕಲಬುರಗಿ, ಎ.23 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ಹಲವರು ಊಟ, ವಸತಿಯಿಲ್ಲದೇ ಸಂಕಷ್ಟದಲ್ಲಿದ್ದು ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ತೆರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ಸೋಂಕು ಕುರಿತಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಊಟವಿಲ್ಲದೇ ಯಾರೂ ಕೂಡಾ ಹಸಿವಿನಿಂದ ಇರಬಾರದು, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಯಾರೇ ಬಂದರು ಅವರಿಗೆ ವ್ಯವಸ್ಥೆ ಮಾಡಬೇಕು. ಪ್ರಸ್ತುತ 14,800 ಕ್ವಿಂಟಾಲ್ ಅಕ್ಕಿ, ಉಪ್ಪಿಟ್ಟು ರವೆ, ಇಡ್ಲಿ ರವೆ, ಎಣ್ಣೆ ಅಗತ್ಯ ದಿನಸಿ ಇದೆ. ಅಗತ್ಯಕ್ಕೆ ಬೇಕಾದ ತರಕಾರಿ ಮಾತ್ರ ಖರೀದಿಸಬೇಕಾಗುತ್ತದೆ. ಕೂಡಲೇ ತರಕಾರಿ ಖರೀದಿ ಮಾಡಿ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ವಸತಿ ನಿಲಯಗಳನ್ನು ಆರಂಭಿಸಿ ತರಕಾರಿಗಳನ್ನು ಒದಗಿಸಬೇಕು. ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವವರಿಗೆ ಬೆಡ್ ಶೀಟ್, ಟವೆಲ್, ಸಾಬೂನು ಮೊದಲಾದವುಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಆದೇಶಿಸಿದರು.
ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವವರು ಹೊರಗೆಲ್ಲೂ ಓಡಾಟ ಮಾಡಬಾರದು, ಅವರು ವಸತಿ ನಿಲಯದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಅವರಿಗೆ ನೀಡಲಾಗಿರುವ ಬೆಡ್ ಶೀಟ್, ಟವೆಲ್ ವಾಪಸ್ ಪಡೆಯಬಾರದು ಎಂದು ನಿರ್ದೇಶನ ನೀಡಿದರು.
ಲಾಕ್ಡೌನ್ನಿಂದಾಗಿ ಹಲವರು ಸಂಕಷ್ಟದಲ್ಲಿದ್ದಾರೆ. ಕ್ಷೌರಿಕ ಅಂಗಡಿಗಳು ಬಂದ್ ಆಗಿರುವುದರಿಂದ ಹಡಪದ ಸಮಾಜದವರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರಿಗೆ ಅಡುಗೆ ದಿನಸಿಯ 1,200 ರೂ. ಮೊತ್ತದ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗೆ ಡಿಸಿಎಂ ಕಾರಜೋಳ ಸೂಚಿಸಿದರು.