ಬೆಂಗಳೂರು, ಎ.23 (Daijiworld News/MB) : ಕೊರೊನಾ ವಿರುದ್ಧದ ಈ ಹೋರಾಟದ ಸಂದರ್ಭದಲ್ಲಿ ಎಷ್ಟೇ ಬಿಕ್ಕಟ್ಟಿನ ಪರಿಸ್ಥಿತಿಯಾದರೂ ಎದುರಿಸಲು ಸಿದ್ದರಾಗಿರಿ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗುರುವಾರ ಅವರು ಅಧಿಕಾರಿಗಳೊಂದಿಗೆ ಕೊರೊನಾದಂತಹ ಯಾವುದೇ ಸಾಂಕ್ರಾಮಿಕ ರೋಗಗಳನ್ನು ನಿರ್ವಹಣೆ ಮಾಡಲು ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಉಪಕರಣ ಸಂಗ್ರಹ, ನಿರ್ವಹಣೆ ಸೇರಿದಂತೆ ಚಿಕಿತ್ಸೆ, ಸೌಲಭ್ಯ ಹೆಚ್ಚಳಕ್ಕಾಗಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಸಭೆ ನಡೆಸಿದ್ದು ಕೊರೊನಾ ಹರಡುವ ಪರಿಸ್ಥಿತಿಯ ಯಾವುದೇ ಸಂದರ್ಭದಲ್ಲಿ ಅದನ್ನು ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿರಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಸ್ತುತ ಪರಿಸ್ಥಿತಿ ಎದುರಿಸಲು ಪ್ರತಿ ಕೇಂದ್ರಕ್ಕೆ ಪಾಲಿಕೆ ವತಿಯಿಂದ 50 ಸಾವಿರ ರೂ. ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ ಕೇಂದ್ರದಲ್ಲಿರುವ ಸೌಕರ್ಯ ಹಾಗೂ ಅಗತ್ಯವಿರುವ ಉಪಕರಣಗಳು ಹಾಗೂ ಇತರ ವ್ಯವಸ್ಥೆಯನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಕೇಂದ್ರದಲ್ಲಿ ಇರುವ ಔಷಧ ದಾಸ್ತಾನು, ವೈದ್ಯಕೀಯ ಉಪಕರಣಗಳು, ಒದಗಿಸಿರುವ ಚಿಕಿತ್ಸೆ, ಆರೋಗ್ಯ ಸೇವೆಗಳ ಕುರಿತಾಗಿ ಡ್ಯಾಶ್ಬೋರ್ಡ್ ನಿರ್ವಹಣೆ ಮಾಡಲು ತಂತ್ರಜ್ಞಾನದ ನೆರವು ಪಡೆಯ ಬೇಕೆಂದು ತಿಳಿಸಿದರು.
ವಿದೇಶ ಪ್ರಯಾಣ ಮಾಡಿದವರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವರನ್ನು ಮಾತ್ರವೇ ಈವರೆಗೆ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಶೀತ, ನೆಗಡಿ, ಕೆಮ್ಮು (ಫ್ಲ್ಯೂ) ಲಕ್ಷಣಗಳಿದ್ದರೂ ಅವ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸದ್ಯ ಆರೋಗ್ಯ ಕೇಂದ್ರಗಳಲ್ಲಿರುವ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಸಿಬ್ಬಂದಿ, ಔಷಧ ಸಂಗ್ರಹ ಕುರಿತಾಗಿ ಮಾಹಿತಿ ಪಡೆದು, ಅಗತ್ಯವಿರುವ ಆಕ್ಸಿಜನ್ ವ್ಯವಸ್ಥೆ, ನೆಬ್ಯುಲೈಸರ್, ಹಾಸಿಗೆ ಸಾಮರ್ಥ್ಯ ಹೆಚ್ಚಳ, ಪ್ರಯೋಗಾಲಯ ಸೌಲಭ್ಯ ವಿಸ್ತರಣೆ ಹಾಗೂ ಹೆಚ್ಚುವರಿ ಔಷಧ ಸಂಗ್ರಹಕ್ಕೆ ಸೂಚಿಸಿದರು.
ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಬೇಕು. ಪ್ರತಿದಿನ ಶಿಷ್ಟಾಚಾರ ಬದಲಾಗುತ್ತಿದೆ, ತಪ್ಪದೇ ಅದನ್ನು ಅನುಸರಿಸಬೇಕು. ವ್ಯವಸ್ಥೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಯಾವುದೇ ತೊಂದರೆ ಉಂಟಾದಲ್ಲಿ ಅದಕ್ಕೆ ಸೂಕ್ತ ಪರಿಹಾರ ನೀಡಿ ಅವರಿಗೆ ಮಾನಸಿಕವಾಗಿ ದೈರ್ಯ ತುಂಬಬೇಕು ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆಗೆ ಎಸೆಯದಂತೆ ನೋಡಿಕೊಂಡು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪಾದಚಾರಿ ರಸ್ತೆಗಳ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.