ನವದೆಹಲಿ, ಎ.24 (Daijiworld News/MB) : ಆರ್ಥಿಕವಾಗಿ ಹದಗೆಡುತ್ತಿದ್ದ ಆರ್ಥಿಕ ವ್ಯವಸ್ಥೆಗೆ ಕೊರೊನಾ ಲಾಕ್ಡೌನ್ ಕೂಡಾ ದೊಡ್ಡ ಪೆಟ್ಟಾಗಿ ಪರಿಣಮಿಸಿದ್ದು ಇದರಿಂದಾಗಿ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ತೆ(ಡಿಎ) ಮತ್ತು ಪಿಂಚಣಿದಾರರ ತುಟ್ಟಿ ಭತ್ತೆ ಮೇಲೂ ಪರಿಣಾಮ ಉಂಟಾಗಿದ್ದು ಈ ಕೇಂದ್ರ ಸರಕಾರ ಎರಡೂ ಭತ್ತೆಗಳ ಹೆಚ್ಚಳಕ್ಕೆ ಒಂದು ವರ್ಷದವರೆಗೆ ತಡೆಯೊಡ್ಡಿದೆ.
ಕೊರೊನಾ ಲಾಕ್ಡೌನ್ ಆರಂಭವಾಗುವ ಮೊದಲು ಮಾರ್ಚ್ನಲ್ಲಿ ಶೇ. 4 ತುಟ್ಟಿ ಭತ್ತೆ ಹೆಚ್ಚಳ ಮಾಡಲು ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಇದೀಗ ಈ ನಿರ್ಧಾರವನ್ನು ಕೈಬಿಡಲಾಗಿದೆ. 2021 ರ ಜುಲೈ 1 ರವರೆಗೆ ಕೇಂದ್ರ ಸರ್ಕಾರ ತುಟ್ಟಿ ಭತ್ತೆಯನ್ನು ಹೆಚ್ಚಳ ಮಾಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ.
ಸರ್ಕಾರಿ ನೌಕರರಿಗೆ ವರ್ಷದಲ್ಲಿ 2 ಬಾರಿ ನೀಡಲಾಗುವ ಸೌಲಭ್ಯ ಇದಾಗಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜೀವನ ವೆಚ್ಚ ಮೊದಲಾದವುಗಳನ್ನು ಆಧರಿಸಿ ಪ್ರಸ್ ಇಂಡಕ್ಸ್ ವರ್ಷಕ್ಕೆ ಎರಡು ಬಾರಿ ಭತ್ತೆ ಹೆಚ್ಚಳ ಮಾಡುವಂತೆ ಸರ್ಕಾರದ ಮುಂದೆ ಪ್ರಸ್ತಾಪ ಮಾಡುತ್ತದೆ. ಸರ್ಕಾರ ಸಂಪುಟದ ಒಪ್ಪಿಗೆ ದೊರೆತ ನಂತರ ಜಾರಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಮಾರ್ಚ್, ಸೆಪ್ಟೆಂಬರ್ನಲ್ಲಿ ನಡೆಯುತ್ತಿತ್ತು.
ಈ ಮೊದಲು ಮಾರ್ಚ್ನಲ್ಲಿ ಕೈಗೊಂಡ ನಿರ್ಧಾರದ ಪ್ರಕಾರವಾಗಿ 2020ರ ಜನವರಿಯಿಂದಲೇ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 21ರ ದರದಲ್ಲಿ ತುಟ್ಟಿ ಭತ್ತೆ ನೀಡಬೇಕಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದ್ದು ಪ್ರಸ್ತುತ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು. 65 ಲಕ್ಷ ಪಿಂಚಣಿದಾರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.