ತಿರುವನಂತಪುರ, ಏ 24(Daijiworld News/MSP): ಕೊರೊನಾ ವೈರಸ್ ವಿಚಾರದಲ್ಲಿ ಕೇರಳ ಸರ್ಕಾರದ ಶ್ರಮ ಮತ್ತು ವೈದ್ಯಕೀಯ ತಂಡದ ಶ್ರಮ ನಿಜಕ್ಕೂ ಮೆಚ್ಚುವಂತಹದ್ದು. ಕಳೆದ ಹತ್ತು ದಿನಗಳ ಅಂಕಿ ಅಂಶ ನೋಡಿದ್ರೆ, ಕೇರಳದಲ್ಲಿ ಕೊವಿಡ್ ಒಂದು ಹಂತಕ್ಕೆ ನಿಯಂತ್ರಿಸುವಲ್ಲಿ ಸಫಲವಾಗಿದೆ. ಕೇರಳ ಸರ್ಕಾರ ಇಷ್ಟೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಂತೆ ಕಿಲ್ಲರ್ ಕೊರೊನಾವು ಮಲಪ್ಪುರಂನಲ್ಲಿ ನಾಲ್ಕು ತಿಂಗಳ ಹಸುಗೂಸನ್ನು ಬಲಿ ಪಡೆದಿದೆ.
ನಾಲ್ಕು ತಿಂಗಳ ಮಗುವಿಗೆ ಮಾರಕ ಸೋಂಕಿನ ಲಕ್ಷಣ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಾಲ್ಕು ತಿಂಗಳ ಹೆಣ್ಣು ಮಗು ಕೊನೆಯುಸಿರೆಳೆದಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಜನಿಸಿದ್ದ ಮಗು ಒಂದು ತಿಂಗಳವರೆಗೂ ಆರೋಗ್ಯವಾಗಿತ್ತು. ಆ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಇದರೊಂದಿಗೆ ಮಗುವಿನಲ್ಲಿ ಕೆಲ ದಿನಗಳಿಂದ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಹೀಗಾಗಿ ಗುರುವಾರ ಮಗುವನ್ನು ಕೋಜಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಕುಟುಂಬದ ಎಲ್ಲರನ್ನು ತಪಾಸಣೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ