ರಾಮನಗರ, ಎ.24 (Daijiworld News/MB) : ಪಾದರಾಯನಪುರ ಆರೋಪಿಗಳನ್ನು ರಾಮನಗರದ ಜೈಲಲ್ಲಿ ಇರಿಸಿದ ಬಳಿಕ ಆ ಪೈಕಿ ಇಬ್ಬರಲ್ಲಿ ಕೊರೊನಾ ದೃಢಪಟ್ಟಿದೆ. ಇದೀಗ ಆರೋಪಿಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಿದ್ದು ಆದರೆ ಈಗ ಮಳೆ ಅಡ್ಡಿಯಾಗಿದೆ.
ಬೆಂಗಳೂರಿನಲ್ಲಿ ಈಗ ಮಳೆ ಆರಂಭವಾದ ಕಾರಣದಿಂದಾಗಿ ಪಾದರಾಯನಪುರದ 119 ಆರೋಪಿಗಳನ್ನು ರಾಮನಗರ ಜೈಲಿನಿಂದ ಮಧ್ಯಾಹ್ನದ ಬಳಿಕ ಬೆಂಗಳೂರಿಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ನಿರ್ಧಾರಿಸಿದ್ದು ರಾಮನಗರ ಡಿಪೊದಿಂದ ಬಂದಿದ್ದ 14 ಬಸ್ ಗಳನ್ನು ವಾಪಸ್ ಡಿಪೊಗೆ ಕಳುಹಿಸಲಾಗಿದೆ.
ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಇರಿಸಲೆಂದು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 121 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದ್ದು ಅವರೆಲ್ಲರನ್ನೂ ಹಂತಹಂತವಾಗಿ ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಆ ಪೈಕಿ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು ಅವರನ್ನು ಗುರುವಾರ ರಾತ್ರಿಯೇ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ.
ಈ ಮೊದಲೇ ಈ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇರಿಸುವುದಕ್ಕೆ ಬಾರೀ ವಿರೋಧ ವ್ಯಕ್ತವಾಗಿತ್ತು.