ನವದೆಹಲಿ, ಎ.24 (Daijiworld News/MB) : ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನಲೆಯಲ್ಲಿ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು ವಿಮಾನಯಾನವನ್ನು ನಿರ್ಬಂಧಿಸಲಾಗಿದೆ. ಈ ಕಾರಣದಿಂದಾಗಿ ಹಲವಾರು ವಿದೇಶಿಯರು ಭಾರತದಲ್ಲೇ ಬಾಕಿಯಾಗಿದ್ದಾರೆ. ತಮ್ಮ ದೇಶಕ್ಕೆ ವಾಪಾಸ್ ಬರಲಾರದೆ ಭಾರತದಲ್ಲೇ ಉಳಿದಿರುವ ತಮ್ಮ ಪ್ರಜೆಗಳನ್ನು ವಾಪಾಸ್ ಕರೆದುಕೊಂಡು ಹೋಗಲು ಮುಂದಾಗಿರುವ ಬ್ರಿಟನ್ ಸರ್ಕಾರ ವಿಶೇಷ ವಿಮಾನಗಳ ಕಳುಹಿಸಲು ನಿರ್ಧರಿಸಿದ್ದು 3,600 ಬ್ರಿಟಿಷ್ ಪ್ರವಾಸಿಗರನ್ನು 14 ವಿಶೇಷ ವಿಮಾನಗಳಲ್ಲಿ ಸ್ವರಾಷ್ಟ್ರಕ್ಕೆ ಮರಳಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬ್ರಿಟನ್ ಸರ್ಕಾರದ ದಕ್ಷಿಣ ಏಷ್ಯಾ ಮತ್ತು ಕಾಮನ್ವೆಲ್ತ್ ರಾಜ್ಯ ಸಚಿವ ಲಾರ್ಡ್ ಅಹ್ಮದ್ 14 ಹೆಚ್ಚುವರಿ ವಿಮಾನಗಳು ಏಪ್ರಿಲ್ 28ರಂದು ಹೊರಡಲಿದ್ದು ಇದು ಸೇರಿದಂತೆ ಬ್ರಿಟನ್ ಸರ್ಕಾರ ಒಟ್ಟು 52 ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.
ತಮ್ಮ ನಾಗರಿಕರನ್ನು ವಾಪಾಸ್ ಕರೆದುಕೊಂಡು ಬರಲು ಭಾರತ ಸರ್ಕಾರ ನಿರಂತರವಾಗಿ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಬ್ರಿಟನ್ ಹೈ ಕಮಿಷನರ್ ಜಾನ್ ಥಾಂಪ್ಸನ್ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬ್ರಿಟನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡೊಮಿನಿಕ್ ರಾಬ್, ಭಾರತದಲ್ಲಿ ಕೊರೊನಾ ಕಾರಣದಿಂದ ಭಾರತ ಪ್ರಯಾಣಕ್ಕೆ ಹಾಗೂ ಅಲ್ಲಿಂದ ವಾಪಾಸ್ ಬರಲು ಸಾಧ್ಯವಿಲ್ಲದ ಕಾರಣದಿಂದಾಗಿ ನಾವು ನಮ್ಮ ನಾಗರಿಕರನ್ನು ವಾಪಾಸ್ ಕರೆದುಕೊಂಡು ಬರಲು ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡಿದ್ದೇವೆ. ಒಟ್ಟು 52 ಬ್ರಿಟಿಷ್ ವಿಮಾನಗಳ ಮೂಲಕ ಭಾರತದಲ್ಲಿರುವ 13,000 ಜನರು ಹಾಗೂ ಸಿಬ್ಬಂದಿಯನ್ನು ಕರೆತರಲಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ಚಾರ್ಟರ್ ವಿಮಾನಗಳ ಮೂಲಕ ಭಾರತದಿಂದ ಸುಮಾರು 6,500 ಬ್ರಿಟಿಷ್ ನಾಗರಿಕರನ್ನು ಬ್ರಿಟನ್ಗೆ ವಾಪಾಸ್ ಕರೆದುಕೊಂಡು ಬರಲು ವ್ವವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಉಳಿದಿರುವ 7,000 ಜನರನ್ನು ವಾಪಾಸ್ ಕರೆದುಕೊಂಡು ಬರಲು ಯೋಜನೆ ಮಾಡುವುದಾಗಿ ಬ್ರಿಟಿಷ್ ಹೈ ಕಮಿಷನ್ ಹೇಳಿದೆ.
ಅಹಮದಾಬಾದ್ನಿಂದ ಏಪ್ರಿಲ್ 28–29, ಮೇ 1,3,4 ಹಾಗೂ ದೆಹಲಿಯಿಂದ ಲಂಡನ್ಗೆ ಏಪ್ರಿಲ್ 30ರಂದು ವಿಮಾನಗಳು ಹಾರಾಟ ನಡೆಸಲಿವೆ.