ನವದೆಹಲಿ, ಎ.24(DaijiworldNews/PY) : ಮೊಟ್ಟೆ, ಚಿಕನ್ನಂತಹ ಮಾಂಸಾಹಾರದ ಸೇವನೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವು ಇಡೀ ಮಾನಚ ಜನಾಂಗಕ್ಕೆ ಧಕ್ಕೆ ಉಂಟು ಮಾಡುವಂತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಅದಲ್ಲದೇ, ಪಕ್ಷಿ, ಪ್ರಾಣಿ ಹಾಗೂ ಮೀನುಗಳ ಹತ್ಯೆಗೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಾ.30ರಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ಕೊರೊನಾ ಹರಡುವಿಕೆಯಲ್ಲಿ ಮೊಟ್ಟೆ ಹಾಗೂ ಕೋಳಿ ಮಾಂಸದ ಪಾತ್ರವಿಲ್ಲ. ಹಾಗಾಗಿ, ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ತಿನ್ನಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ್ದು, ಸಾಮಾಜಿಕ ಜಾಲತಾಣ, ಟಿವಿ, ರೇಡಿಯೋಗಳ ಮೂಲಕವೂ ಈ ವಿಚಾರವಾಗಿ ಪ್ರಚಾರ ನೀಡಿ ಎಂದು ಸಲಹೆ ನೀಡಿತ್ತು. ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿದ ವಿಶ್ವ ಜೈನ ಸಂಘಟನೆ ಸುಪ್ರೀಂಗೆ ಅರ್ಜಿ ಸಲ್ಲಿಸಿದೆ.