ತಿರುವನಂತಪುರ, ಎ.24(DaijiworldNews/PY) : ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಈ ನಿಟ್ಟಿನಲ್ಲಿ ಕೇರಳ ರಾಜ್ಯವು ಸರ್ಕಾರ ನೌಕರರ ಮಾಸಿಕ ವೇತನವನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳಿಗೆ ಆರು ದಿನಗಳಂತೆ ಒಟ್ಟು ಐದು ತಿಂಗಳ ರಾಜ್ಯ ಸರ್ಕಾರಿ ನೌಕರರ ಮಾಸಿಕ ವೇತನದಲ್ಲಿ ಕಡಿತಗೊಳಿಸಲಾಗುವುದು. ಸರ್ಕಾರದ ಅನುದಾನ ಪಡೆಯುವ, ಅರೆಸರ್ಕಾರಿ ಸಂಸ್ಥೆಗಳ ನೌಕರರರಿಗೂ ಈ ವೇತನ ಕಡಿತ ಅನ್ವಯವಾಗಲಿದೆ. ಅಲ್ಲದೇ, ಇದರೊಂದಿಗೆ ವೇತನದ ಶೇ.30 ಭಾಗವನ್ನು ಸಚಿವರು, ಶಾಸಕರು ಮತ್ತು ವಿವಿಧ ಮಂಡಳಿಗಳ ಸದಸ್ಯರು ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ ಎಂದರು.
2018-19ರಲ್ಲಿ ಸಂದರ್ಭ ಸಂಭವಿಸಿದ್ದ ಪ್ರವಾಹದಿಂದ ಆಗಿದ್ದ ಪ್ರಮಾಣದಷ್ಟೇ ನಷ್ಟ ರಾಜ್ಯಕ್ಕೆ ಕೊರೊನಾ ಸೋಂಕಿನಿಂದಾಗಿದ್ದು, ರಾಜ್ಯದ ಅನಿರೀಕ್ಷಿತ ಆರ್ಥಿಕ ಪ್ರಗತಿಯ ಪ್ರಮಾಣದಲ್ಲಿಯೂ ಕುಸಿತ ಕಂಡಿದೆ. ಅಲ್ಲದೇ, ವಿವಿಧ ದೇಶಗಳಲ್ಲಿ ನೆಲೆನಿಂತಿರುವ ಅನಿವಾಸಿ ಕೇರಳಿಗರು ಮಾಡುತ್ತಿದ್ದ ಹಣ ವರ್ಗಾವಣೆ ಕೂಡ ಕಡಿಮೆಯಾಗಿರುವ ಕಾರಣ ರಾಜ್ಯಕ್ಕೆ ಆರ್ಥಿಕವಾಗಿ ತುಂಬಾ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.