ಬೆಂಗಳೂರು, ಏ 24(Daijiworld News/MSP):: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಭೆ ಮಾಡಿದ ಆರೋಪದ ಮೇಲೆ ಬಂಧನ ಮಾಡಿ ರಾಮನಗರ ಜೈಲಿನಲ್ಲಿ ಇರಿಸಿದ ಖೈದಿಗಳಲ್ಲಿ ಐವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಾ.ಸಿಎಸ್.ಅಶ್ವತ್ಥ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಬಿ ಶ್ರೀರಾಮುಲು ಕೂಡಾ ಟ್ವೀಟ್ ಮಾಡಿ ಪಾದರಾಯನಪುರದ ಐವರು ಪುಂಡರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಹಾಗು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎಸ್.ಅಶ್ವತ್ಥ ನಾರಾಯಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ್ದು, , ಪಾದರಾಯನಪುರದ ಗಲಾಟೆಯ ಆರೋಪಿಗಳನ್ನು ಬೆಂಗಳೂರಿನಿಂದ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇದೀಗ ರಾಮನಗರ ಜೈಲಿನಲ್ಲಿ ಸ್ಥಳಾವಕಾಶದ ಕೊರತೆ ಇರುವ ಹಿನ್ನಲೆಯಲ್ಲಿ, ಮತ್ತೆ ಬೆಂಗಳೂರಿಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಇಂತವರನ್ನು ನಗರದ ಹಜ್ ಭವನದಲ್ಲಿ ಇರಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಈ ಹಿಂದೆ ರಾಮನಗರದಲ್ಲಿನ ಜೈಲಿನಲ್ಲಿದ್ದಂತ ಪಾದರಾಯನಪುರದ ಇಬ್ಬರಿಗೆ ಕೊರೊನಾ ದೃಢವಾಗಿತ್ತು. ಆದರೆ ಬಳಿಕದ ವರದಿಯಲ್ಲಿ ಐವರು ಖೈದಿಗಳಿಗೆ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದು ಬಂದಿದೆ. ಇಂತವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಇವರೊಂದಿಗೆ ಇನ್ನೂ ಅನೇಕರಿಗೂ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರೀಕ್ಷೆಗೆ ಒಳಪಡಿಸಿದ ನಂತ್ರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಬಹುತೇಕ ಪಾದರಾಯನಪುರದ ಎಲ್ಲಾ ಖೈದಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.