ನವದೆಹಲಿ, ಎ.24 (Daijiworld News/MB) : ಕೊರೊನಾ ಸೋಂಕಿತರ ಮೇಲೆ ನಡೆಸಲಾದ ಪ್ಲಾಸ್ಮಾ ಥೆರಪಿ ಪ್ರಯೋಗದ ಆರಂಭಿಕ ಫಲಿತಾಂಶವು ಆಶಾದಾಯಕವಾಗಿದ್ದು ಸೋಂಕಿತರ ಪ್ರಾಣ ಉಳಿಸುವ ಭರವಸೆ ಉಂಟಾಗಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಈಗ ನಾಲ್ಕು ಜನರ ಮೇಲೆ ಪ್ಲಾಸ್ಮಾ ಥೆರಪಿ ನಡೆಸಲಾಗಿದ್ದು ಮುಂದಿನ ಎರಡು-ಮೂರು ದಿನಗಳಲ್ಲಿ ಹೆಚ್ಚಿನ ಜನರಿಗೆ ಈ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆ ಬಳಿಕ ಕೇಂದ್ರದ ಅನುಮತಿ ಪಡೆದು ದೆಹಲಿಯ ಎಲ್ಲಾ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗೆಯೇ ಸೋಂಕಿತರನ್ನು ಗುಣಮುಖ ಮಾಡಲು ಗುಣಮುಖರಾದ ಸೋಂಕಿತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ, ಸೋಂಕಿತರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಏನಿದು ಪ್ಲಾಸ್ಮಾ ಥೆರಪಿ?
ಮಾನವನ ದೇಹದಲ್ಲಿ ಯಾವುದೇ ರೋಗದ ವಿರುದ್ಧವಾಗಿ ಹೋರಾಡಬಲ್ಲ ರೋಗ ನಿರೋಧಕ ಶಕ್ತಿ ಇರುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರ ದೇಹಲದಲ್ಲೂ ಈ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅವರ ದುಗ್ಧರಸದಲ್ಲಿ ಈ ಪ್ರತಿರೋಧ ಕಣಗಳು ಇರುತ್ತದೆ. ಗುಣಮುಖರಾದವರಲ್ಲಿ ದುಗ್ಧರಸದಲ್ಲಿರುವ ಪ್ರತಿರೋಧ ಕಣಗಳನ್ನು ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. 2 ಡೋಸ್ನಷ್ಟು ಪ್ರತಿರೋಧ ಕಣಗಳನ್ನು ಓರ್ವ ವ್ಯಕ್ತಿಯಿಂದ ತೆಗೆಯಬಹುದಾಗಿದ್ದು ಇದನ್ನು ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ.
ಕೊರೊನಾ ಗುಣಮುಖರಾದವರ ದೇಹದಲ್ಲಿ ಇರುವ ಈ ಪ್ರತಿರೋಧ ಕಣಗಳು ಕೊರೊನಾ ವೈರಾಣುಗಳ ಮೇಲೆ ದಾಳಿ ನಡೆಸುವ ಗುಣ ಬೆಳೆಸಿಕೊಂಡಿರುವ ಕಾರಣದಿಂದಾಗಿ ರೋಗಪೀಡಿತರ ದೇಹಕ್ಕೆ ಸೇರಿದಾಗ ಪ್ರತಿರೋಧ ಕಣಗಳು ರೋಗದ ವಿರುದ್ಧ ದಾಳಿಯನ್ನು ಮುಂದುವರಿಸುತ್ತವೆ. ಆದರೆ ಹೊಸ ದೇಹದಲ್ಲಿ ಕೆಲವು ಕಾಲವಷ್ಟೇ ಈ ಪ್ರತಿರೋಧ ಕಣಗಳು ಸಕ್ರಿಯವಾಗಿದ್ದು ಅವು ನಿಷ್ಕ್ರಿಯವಾಗುವುದರೊಳಗಾಗಿ ದೇಹವು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುತ್ತದೆ.