ನವದೆಹಲಿ, ಏ 24(Daijiworld News/MSP): ಮುಂಗಾರು ಮಳೆಯ ಅವಧಿಯಲ್ಲಿ ಎರಡನೇ ಹಂತದಲ್ಲಿ ಕೊರೊನಾ ವೈರಸ್ ಆರ್ಭಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಕಾರಣದಿಂದ ಲಾಕ್ ಡೌನ್ ತೆರವಾದರೂ ಸ್ವಲ್ಪಕಾಲದ ವರೆಗೆ ಕೋವಿಡ್-19 ಸೋಂಕು ಹರಡುವುದು ಕಡಿಮೆಯಾಗಬಹುದು. ಆದರೆ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಲ್ಲಿ ಹೊಸ ಸೋಂಕಿನ ಪ್ರಕರಣಗಳು ಏರಿಕೆಯಾಗಲಿದ್ದು, ಇದು ಎರಡನೇ ಹಂತದಲ್ಲಿ ದೇಶವನ್ನು ಅಲ್ಲೋಲಕಲ್ಲೋಲ ಮಾಡಬಹುದು ಎಂದು ಶಿವ್ ನಾಡರ್ ವಿಶ್ವವಿದ್ಯಾನಿಯದ ಸಹಾಯಕ ಪ್ರೊಫೆಸರ್ ಸಮಿತ್ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಮುಂಗಾರಿನ ಈ ಅವಧಿಯಲ್ಲಿ ದೇಶದಲ್ಲಿ ಸೋಂಕಿನ ಹೆಚ್ಚಳದ ವೇಗವೂ ಸಾಮಾಜಿಕ ಅಂತರ ನಿಯಂತ್ರಣ ಹಾಗೂ ಲಾಕ್ ಡೌನ್ ನಿರ್ಬಂಧ ಸಡಿಲಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇವರ ಅಭಿಪ್ರಾಯವನ್ನು ಒಪ್ಪಿಕೊಂಡಿರುವ ಬೆಂಗಳೂರಿನ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ರಾಜೇಶ್ ಸುಂದರೇಶ್ ಅವರು , ಎರಡನೇ ಹಂತದ ಅಲೆಗೆ ಚೀನಾದಲ್ಲಿ ಪ್ರವಾಸದ ನಿರ್ಬಂಧ ಸಡಿಲಿಕೆ ಬಳಿಕ ಬೆಳವಣಿಗೆಯನ್ನು ಉದಾಹರಿಸಬಹುದು ಎಂದಿದ್ದಾರೆ.
ಎರಡನೇ ಹಂತದಲ್ಲಿ ಕೊರೊನಾ ಅಲೆ ಎದ್ದರೆ ಇದು ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸೋಂಕು ಪೀಡಿತರ ಟ್ರೇಸಿಂಗ್, ಪ್ರತ್ಯೇಕಿಸುವಿಕೆ ಮತ್ತು ಹರಡದಂತೆ ತಡೆಯುವುದು ಇವುಗಳು ಸಮರ್ಪಕವಾಗಿರದಿದ್ದರೆ ತೀವ್ರ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬೆಂಗಳೂರು ಮತ್ತು ಮುಂಬೈ ಮೂಲದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಸಲಹೆ ನೀಡಿದ್ದಾರೆ.