ಬೆಂಗಳೂರು, ಎ.24 (DaijiworldNews/PY) : ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಶನಿವಾರ ನಡೆಯಲಿದ್ದು, ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿಯನ್ನು ಮೆಡಿಕಲ್ ಕಾಲೇಜಿನಲ್ಲಿ ಮಾಡಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶುಕ್ರವಾರ ಕೇಂದ್ರದ ಆರೋಗ್ಯ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಮಾ ಥೆರಪಿಗೆ ದಾನಿಯೂ ಸಿಕ್ಕಿದ್ದಾರೆ. ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಇದಾಗಲಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ದೃಢಪಟ್ಟರೆ ಕಳಂಕ ಎಂದು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ಇದೊಂದು ಬೇರೆ ತರಹದ ಒಂದು ವೈರಸ್. ಅದರಿಂದ ಸಹಜವಾಗಿ ಹೇಗೆ ಜ್ವರ ಬರುತ್ತದೋ ಇದೂ ಕೂಡಾ ಶೇ.97ರಷ್ಟು ಕೊರೊನಾ ಸೋಂಕಿತರನ್ನು ಗುಣಪಡಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡರೆ ಭಯ ಪಡುವ ಅವಶ್ಯಕತೆಯಿಲ್ಲ ಎಂದರು
ರಾಜ್ಯದಲ್ಲಿ ಎರಡುವರೆ ತಿಂಗಳಾದರೂ 445 ಪ್ರಕರಣಗಳಷ್ಟೇ ವರದಿಯಾಗಿದೆ. ಇದರ ಪೈಕಿ 200ಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.