ಚಿಕ್ಕಮಗಳೂರು, ಎ.24 (DaijiworldNews/PY) : ಬಡವರಿಗೆ ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿಯಲ್ಲಿಯೂ ಸೊಸೈಟಿಯವರು ಗೋಲ್ಮಾಲ್ ಮಾಡುತ್ತಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್, ನಿಡುವಾಳೆ, ಕೂವೆ ಗ್ರಾಮಗಳ ಸೊಸೈಟಿಯಲ್ಲಿ ಅಕ್ರಮ ನಡೆಯುತ್ತಿದ್ದು, ನಿಗದಿ ಮಾಡಿದಕ್ಕಿಂತಲೂ ಕಡಿಮೆ ಪಡಿತರ ನೀಡುತ್ತಿದ್ದಾರೆ. ಅಲ್ಲದೇ, ಎಲ್ಲರಿಂದಲೂ 30-50 ರೂಪಾಯಿ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಅತಿ ಬಡವರ ಅಂತ್ಯೋದಯ ಕಾರ್ಡ್ ನಲ್ಲೂ ಅಕ್ರಮ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಕೊಡುವ ಅಕ್ಕಿಯಲ್ಲೂ ಕಡಿಮೆ ನೀಡುತ್ತಿದ್ದಾರೆ. ಈ ಬಗ್ಗೆ ಕೇಳಲು ಹೋದರೆ ನಿಮಗೆ ಬರುವುದು ಅಷ್ಟೆ ಎಂದು ಹೇಳುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸೀಮೆ ಎಣ್ಣೆ ಕೂಡಾ ಹಂಚಿಕೆ ಮಾಡಲಾಗಿದೆ. ಆದರೆ, ಸೊಸೈಟಿಯವರು ಸೀಮೆ ಎಣ್ಣೆ ಇಲ್ಲ ಎಂದು ಹೇಳುತ್ತಾರೆ. ಸೀಮೆ ಎಣ್ಣೆಗೆ 35 ರೂಪಾಯಿ. ಆದರೆ ಸೊಸೈಟಿಯವರು 50 ರೂಪಾಯಿ ತೆಗೆದುಕೊಳ್ಳುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವಿಚಾರವಾಗಿ ಅಧಿಕಾರಗಳ ಮೇಲೆ ಆಕ್ರೋಶಗೊಂಡಿರುವ ಸ್ಥಳೀಯರು ಸಚಿವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿ.ಟಿ.ರವಿ ಹೇಳಿದ್ದಾರೆ.