ಶ್ರೀನಗರ, ಎ.25 (Daijiworld News/MB) : ಭದ್ರತಾ ಪಡೆ ಮತ್ತು ಉಗ್ರರ ನಡುವೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾದಲ್ಲಿ ಶನಿವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು ಇಬ್ಬರು ಉಗ್ರರು ಹಾಗೂ ಓರ್ವ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ವರದಿ ತಿಳಿಸಿದೆ.
ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾದ ಗೋರಿಪೋರಾದಲ್ಲಿ ತಂಗಿರುವ ಕುರಿತಾಗಿ ಖಚಿತ ಮಾಹಿತಿ ದೊರೆತಿದ್ದು ಭಾರತೀಯ ಸೇನೆಯ ಕುಮಾವೊನ್ ರೆಜಿಮೆಂಟ್, ಸಿಆರ್ ಪಿಎಫ್ ಬೆಟಾಲಿಯನ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಭದ್ರತಾ ಪಡೆ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರು ಹಾಗೂ ಓರ್ವ ಸಹಚರರನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದು ಸ್ಥಳದಲ್ಲಿದ್ದ ಭಾರೀ ಮದ್ದುಗುಂಡುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಉಗ್ರರು ಶುಕ್ರವಾರ ಬುಡ್ಗಾಮ್ ಜಿಲ್ಲೆಯಲ್ಲಿ ಸಿಆರ್ಪಿಎಫ್ (ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್) ಶಿಬಿರದ ಮೇಲೆ ಗ್ರೆನೇಡ್ ಎಸೆದಿದ್ದು ಈ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿಯಾಗಿದೆ.