ಬೆಂಗಳೂರು,ಏ 25 (Daijiworld News/MSP): ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಇಂದಿನಿಂದ ಪ್ಲಾಸ್ಮಾ ಥೆರಪಿ ಆರಂಭವಾಗುತ್ತಿದ್ದು, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿ "ಇದೊಂದು ಐತಿಹಾಸಿಕ ದಿನ" ಎಂದು ಬಣ್ಣಿಸಿದ್ದಾರೆ.
ಇಂದು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು, ಇಂದಿನಿಂದ ಥೆರಪಿ ಪ್ರಯೋಗ ನಡೆಯಲಿದೆ.
ಇನ್ನು ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಇದೊಂದು ಹೊಸ ಪ್ರಯತ್ನಕ್ಕೆ ಚಾಲನೆ ನೀಡಿದ್ದು, ಕೆಲ ರಾಜ್ಯಗಳಲ್ಲಿ ಮಾಡದ ಕೆಲಸವನ್ನು ನಮ್ಮ ರಾಜ್ಯದಲ್ಲಿ ಮಾಡಲಾಗುತ್ತಿದೆ. ಇದರಿಂದ ರೋಗಿಗಳು ಗುಣಮುಖರಾಗಲಿದ್ದಾರೆಂಬುದು ವೈದ್ಯಕೀಯವಾಗಿ ನಮ್ಮ ನಂಬಿಕೆ ಎಂದು ಅಭಿಪ್ರಾಯಪಟ್ಟರು.
ಇನ್ನು ಇದೇ ವೇಳೆ, ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಅನೇಕ ದೇಶಗಳು ಪ್ಲಾಸ್ಮಾ ಥೆರಪಿಗೆ ಮನ್ನಣೆ ನೀಡಿವೆ. ಈ ನಿಟ್ಟಿನಲ್ಲಿ ನಾವು ಸಾಗೋಣ ಎಂದು ಕರೆ ನೀಡಿದರು. ಇನ್ನು ರೋಗಿಗೆ ಪ್ಲಾಸ್ಮಾವನ್ನು ದಾನ ಮಾಡುವ ದಾನಿಯ ಹೆಸರು ಹಾಗೂ ಅದನ್ನು ಪಡೆಯುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಗುಣಮುಖರಾದವರು ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಬೇಕು. ಈ ಕುರಿತಂತೆ ಸರ್ಕಾರದ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.