ಬೆಂಗಳೂರು, ಎ.25 (Daijiworld News/MB) : ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಶನಿವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ , ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯನವರು, ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ದು:ಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರತಸ್ವಾಮಿ ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಸರಣಿ ಟ್ವೀಟ್ ಮಾಡಿದ್ದು ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ದಿಗ್ಬ್ರಮೆಯಾಗಿದೆ. ವ್ಯವಸ್ಥೆಯ ತಲ್ಲಣಗಳಿಗೆ ಮಿಡಿಯುತ್ತಿದ್ದ ಜೀವ ಕಮರಿ ಹೋದಂತಾಗಿದೆ. ಹಿಂದೂಪರ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಮಹೇಂದ್ರಕುಮಾರ್ ಇದ್ದಕ್ಕಿದ್ದಂತೆ ಬದಲಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನನ್ನೊಂದಿಗೆ ಮುಕ್ತವಾಗಿ ಸಮಾಜದ ತಲ್ಲಣಗಳ ಬಗ್ಗೆ ಚರ್ಚಿಸುತ್ತಿದ್ದರು. ಆನಂತರ ಪಕ್ಷ ರಾಜಕೀಯದಿಂದ ದೂರ ಸರಿದ ಅವರು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರಗತಿಪರ ಚಿಂತಕ ಗುಣವನ್ನು ಬಿಡಲೇ ಇಲ್ಲ. ಆದರೆ ಸಿದ್ಧಾಂತಗಳು ಬದಲಾಗಿದ್ದನ್ನು ನಾನು ಹತ್ತಿರದಿಂದ ಕಂಡಿದ್ದೆ. 'ನಮ್ಮ ಧ್ವನಿ' ಸಂಘಟನೆ ಹುಟ್ಟುಹಾಕಿದ್ದ ಮಹೇಂದ್ರಕುಮಾರ್ ಈ ಮೂಲಕ ರಾಜ್ಯದಾದ್ಯಂತ ಜೀವಪರ ನಿಲುವನ್ನು ಜಾಗೃತಗೊಳಿಸುವ ಕ್ರಿಯೆಯಲ್ಲಿ ಸಕ್ರಿಯರಾಗಿದ್ದರು. ಅಕಾಲಿಕ ಸಾವನ್ನಪ್ಪಿದ ಮಹೇಂದ್ರ ಕುಮಾರ್ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಸದಸ್ಯರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ದಕ್ಕಲಿ ಎಂದಿದ್ದಾರೆ.