ನವದೆಹಲಿ,ಏ 25 (Daijiworld News/MSP): ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್ಡೌನ್ ಘೋಷಿಸಿದ ಒಂದು ತಿಂಗಳ ಬಳಿಕ ಕೇಂದ್ರ ಗೃಹ ಸಚಿವಾಲಯ ತಡರಾತ್ರಿ ನೀಡಿದ ಆದೇಶವೊಂದರಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಮಾಲ್ಗಳು . ಮದ್ಯದಂಗಡಿ ಹೊರತುಪಡಿಸಿ ಜನವಸತಿ ಪ್ರದೇಶದ ಸ್ಥಳೀಯ ಎಲ್ಲಾ ಅಂಗಡಿಗಳನ್ನು ಷರತ್ತಿನೊಂದಿಗೆ ತೆರೆಯಲು ಅವಕಾಶ ನೀಡಿದೆ.
ಆದಾಗ್ಯೂ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ ಆದೇಶದಲ್ಲಿ, ಪುರಸಭೆಯ ಪ್ರದೇಶಗಳಲ್ಲಿರುವ ಮಾರುಕಟ್ಟೆ , ಮಲ್ಟಿ-ಬ್ರಾಂಡ್ ಮತ್ತು ಸಿಂಗಲ್-ಬ್ರಾಂಡ್ ಮಾಲ್ಗಳಲ್ಲಿನ ಅಂಗಡಿಗಳು ಮೇ 3 ರವರೆಗೆ ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಶೇಕಡಾ 50 ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಅಂಗಡಿಯವರು ಹಾಗೂ ಗ್ರಾಹಕರು ಮಾಸ್ಕ್ಗಳು, ಗ್ಲೌಸ್ಗಳು ಧರಿಸುವುದರ ಜೊತೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವೆಂದು ಕೇಂದ್ರ ಸರಕಾರ ಆದೇಶಿಸಿದೆ.
ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನೋಂದಣಿ ಕಾಯ್ದೆಯಡಿ ನೋಂದಾಯಿತಗೊಂಡಿರುವ ವಸತಿ ಪ್ರದೇಶಗಳಲ್ಲಿರುವ ನೆರೆಯ ಹಾಗೂ ಸ್ವತಂತ್ರ ಅಂಗಡಿಗಳಿಗೆ ಲಾಕ್ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.
ಆದರೆ ಮದ್ಯದಂಗಡಿ, ಸಿಂಗಲ್ ಬ್ರ್ಯಾಂಡ್ ಹಾಗೂ ಬಹು ಬ್ರ್ಯಾಂಡ್ ಮಾಲ್ಗಳಲ್ಲಿನ ಅಂಗಡಿಗಳಿಗೆ ವಿನಾಯಿತಿ ಇಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.