ಕಾಸರಗೋಡು, ಏ 25 (Daijiworld News/MSP): ಕಾಸರಗೋಡಿನಿಂದ ಮಂಗಳೂರಿಗೆ ಜನ ಬರೋದಕ್ಕೆ ಮಾಜಿ ಪ್ರಧಾನಿಗಳಿಗೆ ವಿರೋಧವಿಲ್ಲ. ಆದರೆ ಇಂದು ಪಾದರಾಯನಪುರದ ಬಾಂಧವರು ರಾಮನಗರಕ್ಕೆ ಬರಬೇಡಿ ಎಂದು ಹೇಳುವುದು ಎಷ್ಟು ಸರಿ ?ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್ , "ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರೋದಕ್ಕೆ ಮಾಜಿ ಪ್ರಧಾನಿಗಳಿಗೆ ವಿರೋಧವಿಲ್ಲ. ಇದಕ್ಕೆ ಪ್ರಧಾನಿಯವರಿಗೆ ಪತ್ರ ಬರೆದವರು, ಇಂದು ಪಾದರಾಯನಪುರದ ಬಾಂಧವರು ರಾಮನಗರಕ್ಕೆ ಬರಬೇಡಿ ಎಂದು ಹೇಳುವುದು ಎಷ್ಟು ಸರಿ? ರಾಜ್ಯ ಅಂದರೆ ಕೇವಲ ರಾಮನಗರ ಜಿಲ್ಲೆಯೇ? " ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಕಾಸರಗೋಡಿನ ಜನರಿಗೆ ಮಂಗಳೂರಿಗೆ ಬರಲು ಅನುಮತಿ ನೀಡುವಂತೆ ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಆದರೆ ಬೆಂಗಳೂರಿನಿಂದ ಪಾದರಾಯನಪುರದ ಪುಂಡರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ್ದನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತೀವ್ರವಾಗಿ ಟೀಕಿಸಿದ್ದರು.
ಒಟ್ಟಾರೆ ಕೊರೊನಾ ಯೋಧರ ಮೇಲೆ ದಾಂಧಲೆ ನಡೆಸಿದ ಪಾದರಾಯನಪುರದ ಪುಂಡರು ಯಾರಿಗೂ ಬೇಡವಾಗಿದ್ದಾರೆ. ಪಾದರಾಯನಪುರ ಪ್ರಕರಣದಲ್ಲಿ ಬಂಧಿತರಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಈ ಪುಂಡರ ಸಹವಾಸದಿಂದ ದೂರ ಉಳಿಯಲು ಪ್ರಯತ್ನಿಸುತ್ತಿದೆ. ಬೆಂಗಳೂರಿನಿಂದ ರಾಮನಗರ ಜೈಲಿಗೆ ಮತ್ತೆ ಅಲ್ಲಿಂದ ಬೆಂಗಳೂರಿನ ಹಜ್ ಭವನಕ್ಕೆ ಪುಂಡರನ್ನು ಕರೆತಂದರೂ ಹಜ್ ಭವನದಲ್ಲೂ ಸ್ವಾಗತವಿಲ್ಲದೆ ಅಲ್ಲಿಂದಲೂ ಸ್ಥಳಾಂತರಿಸುವಂತೆ ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ಒತ್ತಾಯಿಸುತ್ತಿದ್ದಾರೆ.