ನವದೆಹಲಿ, ಎ.25 (Daijiworld News/MB) : ಕೊರೊನಾ ಲಾಕ್ಡೌನ್ನಿಂದ ಸುಮಾರು ಒಂದು ತಿಂಗಳ ಕಾಲ ಮುಚ್ಚಲಾಗಿರುವ ಇಂದಿರಾಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಲಾಕ್ಡೌನ್ ಬಳಿಕ ಪುನರ್ ಆರಂಭ ಮಾಡಲು ಸಜ್ಜಾಗುತ್ತಿದೆ.
ಮೇ ಮೂವರವರೆಗೆ ಚಾಲ್ತಿಯಲ್ಲಿ ಇರಲಿರುವ ಕೊರೊನಾ ಲಾಕ್ಡೌನ್ ಆ ಬಳಿಕ ತೆರವುಗೊಳಿಸಿದರೆ ವಿಮಾನ ನಿಲ್ದಾಣ ಪುನರ್ ಆರಂಭ ಕುರಿತಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಡಳಿತ ಮಂಡಳಿ ಶಿಫಾರಸು ಮಾಡಿದ್ದು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟನಲ್ಲಿ ಹೊಸ ಕಾನೂನುಗಳನ್ನು ಜಾರಿ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿಯಮದ ಪ್ರಕಾರವಾಗಿ ವಿಮಾನ ನಿಲ್ದಾಣದಲ್ಲಿ ಕ್ಯೂ ಇಲ್ಲದೆ ಪ್ರಯಾಣಿಕರಿಗಾಗಿ 'ಸಿಟ್ ಅಂಡ್ ವೇಯ್ಟ್' ಪದ್ಧತಿ ಜಾರಿ ಮಾಡಲಾಗುತ್ತದೆ. ಹಾಗೆಯೇ ವಿಮಾನ ನಿಲ್ದಾಣದ ಒಳಪ್ರವೇಶಿಸುವ ಪ್ರತಿಯೊಬ್ಬರ ದೇಹದ ಉಷ್ಣತೆಯನ್ನು ಪರೀಕ್ಷೆ ನಡೆಸಿ ಜ್ವರವಿದ್ದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ. ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಬೇಕು ಇಲ್ಲದಿದ್ದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಪ್ರಯಾಣಿಕರಿಗೆ ವಿಶಾಲವಾದ ಆಸನ ಸೌಲಭ್ಯ ಒದಗಿಸಲಾಗುವುದು, ಪ್ರಯಾಣಿಕರಿಗಾಗಿ ಇರುವ ಆ ಆಸನದಲ್ಲಿ ಎರಡು ಆಸನಗಳ ನಡುವೆ ಒಂದು ಮೀಟರ್ ಅಂತರ ಇರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ವಿಮಾನದ ಒಳಗೆ ಶೌಚಾಲಯದ ಬಳಕೆಯನ್ನು ಮಿತಿಗೊಳಿಸಲಾಗುವುದು. ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾದ್ದಲ್ಲಿ ಮತ್ತಷ್ಟು ಬದಲಾವಣೆ ತರಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಗೋ ಏರ್ ವಿಮಾನ ಸಂಸ್ಥೆಯು ಹೊರಗಿನಿಂದ ಯಾವುದೇ ಆಹಾರ ಪದಾರ್ಥಗಳನ್ನು ವಿಮಾನದ ಒಳಗೆ ತರಬಾರದೆಂದು ಆದೇಶಿಸಿದ್ದು ಇಂಡಿಗೋ ವಿಮಾನ ಸಂಸ್ಥೆ ವಿಮಾನದಲ್ಲಿ ಊಟ ನಿಷೇಧಿಸಲಾಗಿದೆ. ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಮಿತವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದೆ.