ಲಕ್ನೋ, ಏ 25 (Daijiworld News/MSP): ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಜೂನ್ 30 ರವರೆಗೆ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಅವರು ಕೊರೊನಾದ ಬಳಿಕ ಪರಿಸ್ಥಿತಿಯ ಕುರಿತಂತೆ ರಾಜ್ಯದ 11 ಸಮಿತಿಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ, "ಜೂನ್ 30 ರವರೆಗೆ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಸಿಎಂ ಯೋಗಿ ಆದಿತ್ಯನಾಥ್ ಕಚೇರಿ ಟ್ವೀಟ್ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಉತ್ತರ ಪ್ರದೇಶದಲ್ಲಿ 1,621 ಕೊರೊನಾವೈರಸ್ ಪ್ರಕರಣಗಳಿದ್ದು ಈ ಪೈಕಿ 247 ಮಂದಿ ಗುಣಮುಖರಾಗಿದ್ದು 25 ಸಾವುಗಳು ಸಂಭವಿಸಿದೆ.