ಚಾಮರಾಜನಗರ, ಎ.25 (Daijiworld News/MB) : "ಕೊರೊನಾ ಲಾಕ್ಡೌನ್ ಮೇ 3ರ ವರೆಗೂ ಜಾರಿಯಲ್ಲಿದ್ದು ಆ ನಂತರ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ವರದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಸ್ತುತ ಕೊರೊನಾ ವಿರುದ್ಧದ ಹೋರಾಟವೇ ಎಸ್ಎಸ್ಎಲ್ಸಿ ಪರೀಕ್ಷೆಗಿಂತ ದೊಡ್ಡದಾದ ಪರೀಕ್ಷೆ. ಹೀಗಾಗಿ ಮೇ ಮೂರರ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆಯ ಬಗ್ಗೆ ತೀರ್ಮಾನ ಮಾಡಲಾಗುವುದು. ಯಾವ ಸಮಯದಲ್ಲಿ ಪರೀಕ್ಷೆ ನಡೆಸಬೇಕು? ಮಕ್ಕಳಿಗೆ ಓದಲು ಎಷ್ಟು ಕಾಲಾವಕಾಶ ನೀಡಬೇಕು ಎಂದು ನಿರ್ಧಾರ ಮಾಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ" ಎಂದು ಅವರು ಸ್ಪಷ್ಟಪಡಿಸಿದರು.
"ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತಾಗಿ ಹಲವಾರು ಅನುಮಾನಗಳು ಮೂಡಿಸುವ ಕೆಲಸಗಳು ಕೆಲವರು ಮಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಬಹಳಷ್ಟು ಗೊಂದಲ ಉಂಟಾಗಿದೆ. ಇನ್ನು ಪೋಷಕರೂ ಕೂಡಾ ಗೊಂದಲ, ಆತಂಕದಲ್ಲಿದ್ದಾರೆ. ಯಾವುದೇ ಗೊಂದಲ ಬೇಡ, ಮೇ ಮೂರರ ನಂತರ ಈ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದು ಅವರು ಹೇಳಿದರು.
ಹಾಗೆಯೇ ಪಾದರಾಯನಪುರ ಆರೋಪಿಗಳ ಕುರಿತಾಗಿ ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿರುವುದು ಆಡಳಿತಾತ್ಮಕ ನಿರ್ಧಾರ" ಎಂದು ಪ್ರತಿಕ್ರಿಯೆ ನೀಡಿದರು.