ನವದೆಹಲಿ, ಎ.25 (Daijiworld News/MB) : ಈಗಾಗಲೇ ಎಲ್ಲಾ ಜನರು ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಮತ್ತು ಸೇನಾ ಯೋಧರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಸೌಲಭ್ಯ ಕಡಿತ ಮಾಡಿರುವುದು ಅಮಾನವೀಯ ಮತ್ತು ನಿರ್ದಾಕ್ಷಿಣ್ಯ ಕ್ರಮ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಕುರಿತಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಟ್ವೀಟ್ ಪೇಜ್ನ ನೇರ ಪ್ರಸಾರದಲ್ಲಿ ಮಾತನಾಡಿದ್ದು ಈ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದು ಸರ್ಕಾರಿ ನೌಕರರ ಸೌಲಭ್ಯವನ್ನು ಕಡಿತಗೊಳಿಸುವ ಬದಲಾಗಿ ಬುಲೆಟ್ ರೈಲು ಯೋಜನೆ ಮತ್ತು ಸೆಂಟ್ರಲ್ ವಿಸ್ಟಾ ಸುಂದರೀಕರಣ ಯೋಜನೆಯನ್ನು ಕೈಬಿಡಲಿ. ಅದರಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಹಣ ಉಳಿಸಲಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರು ಕೂಡಾ ವಿಡಿಯೋ ಮುಖೇನ ಮಾತನಾಡಿದ್ದು ಕೊರೊನಾ ಲಾಕ್ಡೌನ್ನಿಂದಾಗಿ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನರ ಸಂಕಷ್ಟ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು. ಆದರೆ ಅವರು 1.1 ಕೋಟಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ತನ್ನ ಈ ನಿರ್ದಾಕ್ಷಿಣ್ಯ ಕ್ರಮದಿಂದಾಗಿ ನೋವುಂಟು ಮಾಡಿದ್ದಾರೆ. ಈ ರೀತಿ ಜನರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಡಿತ ಮಾಡುವ ಬದಲಾಗಿ ಕೆಲವು ನಿರುಪಯೋಗ ಯೋಜನೆಗಳಿಗಾಗಿ ಕೇಂದ್ರ ಮಾಡುವ ವ್ಯಯವನ್ನು ಕಡಿತ ಮಾಡಲಿ ಎಂದು ಒತ್ತಾಯಿಸಿದ್ದಾರೆ.