ಚಿತ್ರದುರ್ಗ, ಎ.25 (Daijiworld News/MB) : ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಹಲವರು ಈಗಾಗಲೇ ದೇಣಿಗೆ ನೀಡಿದ್ದಾರೆ. ಈವರೆಗೆ ಎಷ್ಟು ದೇಣಿಗೆ ಸಂಗ್ರಹವಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿ, ಹಾಗೆಯೇ ಇದರಿಂದ ಬಡವರಿಗೆ, ನಿರ್ಗತಿಕರಿಗೆ, ಕೃಷಿ ಹಾಗೂ ಕೂಲಿ ಕಾರ್ಮಿಕರಿಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದ್ದಾರೆ.
ಶನಿವಾರ ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಾವು ಎರಡು ತಿಂಗಳಿಗೆ ಆಗುವಷ್ಟು ಪಡಿತರ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಈ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಅನ್ನಭಾಗ್ಯ ಕಾರ್ಯಕ್ರಮ. ಅಷ್ಟು ಮಾತ್ರವಲ್ಲದೇ ಇವರು ಅದರಲ್ಲಿಯೂ ಎರಡು ಕೆಜಿ ಅಕ್ಕಿಯನ್ನು ಕಡಿಮೆ ಮಾಡಿಯೇ ಬಡವರಿಗೆ ವಿತರಣೆ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೊರೊನಾ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮ, ದೇಣಿಗೆ ಸಂಗ್ರಹ ಎಲ್ಲದರ ಕುರಿತಾಗಿ ಅಂಕಿ ಅಂಶ ಸಮೇತ ಬಹಿರಂಗವಾಗಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ ಅವರು ಕೋಟ್ಯಾಂತರ ಲಾಭ ಗಳಿಸಿರುವ ಗಣಿಗಾರಿಕೆಯಲ್ಲಿ ತೊಡಗಿರುವ ಅನೇಕ ಕಂಪನಿಗಳ ಮಾಲೀಕರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದರ ಕುರಿತಾಗಿಯೂ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಡವರಿಗೆ ಈ ಸಂಕಷ್ಟದ ಕಾಲದಲ್ಲಿ ಉಪಯೋಗವಾಗಲೆಂದು ಸರ್ಕಾರವು ಉಚಿತ ಹಾಲು ನೀಡುತ್ತಿದೆ. ಆದರೆ ಅದರಲ್ಲೂ ದುರುಪಯೋಗ ಆಗುತ್ತಿದೆ. ತಮಗೆ ಬೇಕಾದವರಿಗೆ ಹಂಚಲಾಗುತ್ತಿದೆ. ಹಾಲು ಸಿಗುವ ಆಸೆಯಲ್ಲಿರುವ ಬಡವರಿಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊರೊನಾ ವಿರುದ್ಧವಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ನಿಜವಾಗಿ ಸವಲತ್ತು ದೊರೆಯಬೇಕಾದವರಿಗೆ ಏನನ್ನು ನೀಡಿಲ್ಲ. ಅಕ್ಕಿ, ಗೋಧಿಯ ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲೇ ಬೇಳೆ, ಎಣ್ಣೆ, ಬೆಲ್ಲ, ಸೋಪು ಸೇರಿ ಅಗತ್ಯ ಸಾಮಗ್ರಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಇನ್ನಾದರೂ ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ವಿನಂತಿಸಿದ್ದಾರೆ.