ಬೆಂಗಳೂರು, ಎ.25 (DaijiworldNews/PY) : ರಾಜ್ಯ ಸರ್ಕಾರವು ನಕಲಿ ಬೀಜ ಹಾಗೂ ಕೀಟ ನಿಯಂತ್ರಕ ಔಷಧಿಗಳ ಮಾರಾಟಗಾರರ ಮಾಫಿಯಾ ತಡೆಗಟ್ಟಲು ತೀರ್ಮಾನವನ್ನು ತೆಗೆದುಕೊಂಡಿದೆ. ರೈತರು ದೃಢೀಕರಣಗೊಂಡ ಮತ್ತು ಪ್ರಮಾಣೀಕೃತ ಬೀಜಗಳನ್ನು ಖರೀದಿಸಬೇಕು ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ಎ.24ರಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಸೂಚನೆಯಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಕೆಲವು ಗೋದಾಮುಗಳಿಗೆ ದಾಳಿ ಮಾಡಿದ್ದು, ಅಪಾರ ಪ್ರಮಾಣದ ಮೆಕ್ಕೆಜೋಳ ಬೀಜದ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಬೀಜ ಮಾರಾಟಗಾರರ ಜಾಲವನ್ನೂ ಪತ್ತೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಶಿಥಲೀಕರಣ ಘಟಕಗಳಿಂದ ಸುಮಾರು 7026 ಕ್ವಿಂಟಲ್, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ 70 ಕ್ವಿಂಟಲ್ ಮತ್ತು ಧಾರವಾಡ ಜಿಲ್ಲೆಯಲ್ಲಿ 270.60 ಕ್ವಿಂಟಲ್ ಒಟ್ಟು 7366 ಕ್ವಿಂಟಲ್ ಬೀಜಗಳ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸುಮಾರು 10 ಕೋಟಿ ಪ್ರಮಾಣದ ನಕಲಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಅವರು ಕೃಷಿ ಸಚಿವರ ಶ್ರಮ ಹಾಗೂ ರೈತಪರ ಕಾಳಜಿಯನ್ನು ಶ್ಲಾಘಿಸಿದ್ದು, ಕೃಷಿ ಅಧಿಕಾರಿಗಳಿಗೆ ನಕಲಿ ಬೀಜ ದಾಸ್ತಾನುದರರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿರುವ ನಿಟ್ಟಿನಲ್ಲಿ ರೈತರೂ ಪ್ರಮಾಣೀಕೃತ ಬೀಜಗಳನ್ನು ಖರೀದಿ ಮಾಡಬೇಕು. ರಾಜ್ಯದ ಸುಮಾರು 10 ರಿಂದ 11 ಜಿಲ್ಲೆಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವ ರೈತರು ದೃಢೀಕರಿಸಿದ ಬೀಜಗಳ ಮೇಲೆ ಅವಲಂಭಿತರಾಗಿದ್ದಾರೆ. ನಕಲಿ ಬೀಜಗಳ ಬಗ್ಗೆ ಎಚ್ಚರದಿಂದಿರಿ. ಬಿಡಿ ಬೀಜಗಳನ್ನು ಖರೀದಿ ಮಾಡಬಾರದು ಎಂದರು.