ಬಳ್ಳಾರಿ, ಎ.25 (DaijiworldNews/PY) : ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕು ಆವರಿಸಿದ್ದು, ಶೀಘ್ರವೇ ಬಳ್ಳಾರಿ ಜಿಲ್ಲೆ ಕೊರೊನಾ ವೈರಸ್ನಿಂದ ಮುಕ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಶನಿವಾರ ನಗರದ ಡಿಸಿ ಕಚೇರಿಯಲ್ಲಿ ನಡೆದ ಸರ್ವ ಪಕ್ಷದ ಸದಸ್ಯರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕು ಆವರಿಸಿದ್ದು, ಶೀಘ್ರವೇ ಬಳ್ಳಾರಿ ಜಿಲ್ಲೆ ಕೊರೊನಾ ವೈರಸ್ನಿಂದ ಮುಕ್ತವಾಗಲಿದೆ. ಇದರಿಂದ ಬಳ್ಳಾರಿ ಜಿಲ್ಲೆ ಮುಕ್ತವಾಗುವ ದಿನ ಹತ್ತಿರದಲ್ಲೇ ಇದ್ದು, ಜಿಲ್ಲಾಡಳಿತ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ ಎಂದು ತಿಳಿಸಿದರು.
ಈ ಕುರಿತು ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸಂಸದರು, ಸರ್ವ ಪಕ್ಷಗಳ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಆರೋಗ್ಯ ಕ್ಷೇತ್ರ, ರೈತರು, ಬೆಳೆಗಾರರ ಪರವಾಗಿ ಬೆಳೆಹಾನಿಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಯಿತು ಎಂದರು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಆವರಿಸಿದ್ದ ಕೊರೊನಾ ಸೋಂಕನ್ನು ತಡೆಗಟ್ಟಲು ಶ್ರಮಿಸಿದ್ದು, ಅವರ ಪಾತ್ರ ಪ್ರಮುಖವಾಗಿದೆ. ಅವರು ಲಾಕ್ಡೌನ್ ಆದ ಸಂದರ್ಭದಿಂದಲೂ ಶ್ರಮಿಸುತ್ತಿದ್ದಾರೆ. ಹಾಗಾಗಿ ವೈದ್ಯರು, ವಕೀಲರ ಸಂಘದ ಅಧ್ಯಕ್ಷರು, ಸಂಘ ಸಂಸ್ಥೆಗಳ ಮುಖಂಡರು ಕೊರೊನಾ ವಾರಿಯರ್ಸ್ ಗಳಿಗೆ ಸರ್ಕಾರದಿಂದ ಏನಾದರೂ ಸಹಾಯ ಮಾಡಬೇಕು ಎಂಬುದಾಗಿ ಸಲಹೆ ನೀಡಿದ್ದಾರೆ. ಆ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಕ್ರಮತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ನಾನು ಈ ಮೂರು ಕ್ಷೇತ್ರಗಳ ಪರವಾಗಿ ನಿಲ್ಲುತ್ತೇನೆ. ಮುಂದೆ ಅತೀವೃಷ್ಠಿ, ಅನಾವೃಷ್ಠಿ, ಬೆಳೆಹಾನಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾದರೂ, ಸರ್ಕಾರದಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಲಭಿಸುವ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.