ನವದೆಹಲಿ, ಎ.26 (Daijiworld News/MB) : ಇಡೀ ದೇಶವು ಒಂದೇ ಲಕ್ಷ್ಯ, ಒಂದೇ ಹಾದಿಯಲ್ಲಿ ಸಾಗಿ ಕೊರೊನಾದ ವಿರುದ್ಧ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಬೆಳಿಗ್ಗೆ 11 ಗಂಟೆಗೆ 64ನೇ ಕಂತಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧವಾಗಿ ಇಡೀ ದೇಶವೇ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಸರ್ಕಾರ ಕಾನೂನು, ನೀತಿ ರೂಪಿಸುವ ಮತ್ತು ವೈದ್ಯಕೀಯ ಸೌಲಭ್ಯ ಹೆಚ್ಚಿಸುತ್ತಿದೆ. ಕೊರೊನಾ ಟೆಸ್ಟಿಂಗ್ ಸಾಮರ್ಥ್ಯ ಹೆಚ್ಚಳ ಮಾಡುವುದು, ವೈದ್ಯಕೀಯ ಸಾಮರ್ಥ್ಯ ಹೆಚ್ಚಿಸುವುದು, ವೈದ್ಯಕೀಯ ಸಿಬ್ಬಂದಿಗೆ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಎಲ್ಲಾ ರಾಜ್ಯ ಸರ್ಕಾರಗಳು ಕೊರೊನಾದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ರಾಜ್ಯಕ್ಕೆ ನನ್ನ ಧನ್ಯವಾದ. ಕೊರೊನಾ ವಾರಿಯರ್ಸ್ ಆಗಿ ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಹಾಕುವುದು ಅತೀ ಮುಖ್ಯ. ನಾವು ಆರೋಗ್ಯವಂತರಾಗಿ ಬದುಕಬೇಕು ಮತ್ತು ಇತರರನ್ನು ಕೂಡಾ ಆರೋಗ್ಯವಂತರಾಗಿ ಬದುಕಲು ಬಿಡಬೇಕು ಆ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಎಂದು ಮನವಿ ಮಾಡಿದರು.
ಇನ್ನು ಅಕ್ಷಯ ತೃತೀಯ, ರಂಝಾನ್ ತಿಂಗಳ ಸಂದರ್ಭದಲ್ಲಿ ಯಾರೂ ಕೂಡಾ ಮನೆಯಿಂದ ಹೊರಗೆ ಹೋಗಬೇಡಿ. ಮನೆಯಲ್ಲೇ ಇದ್ದು ಆಚರಿಸಿ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕುರಿತಾಗಿ ಚರ್ಚೆ ನಡೆಯುತ್ತಿದೆ. ವಿಶ್ವವೇ ಭಾರತದ ಆಯುರ್ವೇದ ಮತ್ತು ಯೋಗವನ್ನು ಇಂದು ಗಮನಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಆಯುಷ್ ಸಚಿವಾಲಯ ನೀಡಿರುವ ಸಲಹೆಗಳನ್ನು ಪಾಲಿಸಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಿ ಎಂದು ಪ್ರಧಾನಿ ತಿಳಿಸಿದ್ದಾರೆ.