ನವದೆಹಲಿ, ಎ.26 (DaijiworldNews/PY) : ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪರೀಕ್ಷೆ ಹಾಗೂ ಪತ್ತೆ ಹಚ್ಚುವಿಕೆ ಪ್ರಮುಖ ಅಸ್ತ್ರಗಳಾಗಿವೆ. ಪರೀಕ್ಷೆಗಳು ಆಕ್ರಮಣಕಾರಿಯಾಗಿ ನಡೆಯದಿದ್ದರೆ ಕೊರೊನಾ ವಿರುದ್ದ ಜಯ ಸಾಧಿಸಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಅವರು, ಪರೀಕ್ಷೆ ಹಾಗೂ ಪತ್ತೆ ಹಚ್ಚುವಿಕೆ ಮುಖ್ಯ ಅಸ್ತ್ರಗಳಾಗಿವೆ. ಆಕ್ರಮಣಕಾರಿಯಾಗಿ ಪರೀಕ್ಷೆಗಳು ನಡೆಯದಿದ್ದಲ್ಲಿ ಕೊರೊನಾ ವಿರುದ್ದ ಜಯ ಸಾಧಿಸಲು ಆಗುವುದಿಲ್ಲ. ಪರೀಕ್ಷಾ ಸೌಲಭ್ಯಗಳಿಗೆ ಸಂಬಂಧಿಸಿದಂತಹ ಸಮಸ್ಯೆಗಳಿವೆ ಎಂದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಲವು ನಾಯಕರು ಕೊರೊನಾ ಬಿಕ್ಕಟ್ಟಿಗೆ ಸಂಬಂಧಿಸಿದಂತ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರ ಸಮಸ್ಯೆಯ ವಿಚಾರದ ಬಗ್ಗೆ ಮಾತನಾಡಿದ್ದು, ಪಕ್ಷವು ವಲಸೆ ಕಾರ್ಮಿಕರ ರಕ್ಷಣೆಗಾಗಿ ಯೋಜನೆಯನ್ನು ರೂಪಿಸಲಿದೆ ಎಂದು ತಿಳಿಸಿದ್ದಾರೆ.
ತಪಾಸಣೆ ಹಾಗೂ ಪತ್ತೆ ಮಾಡುವುದು ಕೊರೊನಾ ಹೋರಾಟ ವಿರುದ್ದದ ಪ್ರಮುಖ ಅಸ್ತ್ರಗಳಾಗಿವೆ. ರಕ್ಷಣೆ ಹಾಗೂ ಆರ್ಥಿಕ ಭದ್ರತೆಗಳನ್ನು ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಅನುಸರಿಸಬೇಕು. ಇದೊಂದೇ ನಮ್ಮ ಮುಂದಿರುವ ದಾರಿಯಾಗಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಹೇಳಿದೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಮುಖಂಡರಾದ ಕೆ.ಸಿ.ವೇಣುಗೋಪಾಲ್, ಜಯರಾಮ್ ರಮೇಶ್ ಹಾಗೂ ಮನೀಶ್ ತಿವಾರಿ ಅವರೂ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.