ನವದೆಹಲಿ, ಎ.26 (DaijiworldNews/PY) : ಕೊರೊನಾ ವಿರುದ್ದದ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಹೊಸ ಆಯುಧ, ರಕ್ತಕ್ಕೆ ಯಾವುದೇ ಧರ್ಮ, ಬೇಧವಿಲ್ಲ. ಪೂರ್ವಾಗ್ರಹ ಪೀಡಿತರಾಗದೇ ಪ್ಲಾಸ್ಮಾ ದಾನ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಬೇಕು. ಕೊರೊನಾ ಸಂಕಷ್ಟದಿಂದ ನಾವೆಲ್ಲರೂ ಹೊರ ಬಂದು ಬದುಕಲು ಪ್ರಯತ್ನಿಸುತ್ತೇವೆ. ನಾವು ಜೀವ ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪ್ಲಾಸ್ಮಾ ಥೆರಪಿ ನಂತರ ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ಚೇತರಿಕೆ ಕಂಡುಬಂದಿದ್ದು, ಹಲವು ರೋಗಿಗಳು ದೆಹಲಿಯಲ್ಲಿ ಗುಣವಾಗಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾದಿಂದ ಗುಣಮುಖರಾದ ಜನರಿಗೆ ಪ್ಲಾಸ್ಮಾ ದಾನ ಮಾಡಲು ಮನವಿ ಮಾಡಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖವಾದ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳಿದ್ದು, ಅವು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರು ವ್ಯಕ್ತಿಗೆ ಆ ಪ್ಲಾಸ್ಮಾವನ್ನು ತೆಗೆದು ನೀಡುವುವುದನ್ನು ಪ್ಲಾಸ್ಮಾ ಥೆರಪಿ ಎಂದು ಕರೆಯಲಾಗುತ್ತದೆ. ಕೊರೊನಾ ಸೋಂಕಿನಿಂದ ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಗುಣಮುಖರಾಗುವುದು ವಿದೇಶದಲ್ಲಿ ಸಾಬೀತಾಗಿದೆ.
ಪ್ಲಾಸ್ಮಾವನ್ನು ಸೋಂಕು ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ನಂತರ ದಾನ ಮಾಡಬಹುದು. ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದು, ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೂ ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ದಾನಿಯೊಬ್ಬನ ಪ್ಲಾಸ್ಮಾವನ್ನು ನೀಡಬಹುದು ಎಂದು ತಜ್ಞರು ತಿಳಿಸಿದ್ದಾರೆ.