ನವದೆಹಲಿ, ಎ.26 (DaijiworldNews/PY) : ಪ್ರಧಾನಿ ಮೋದಿ ಅವರು ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಲಾಕ್ಡೌನ್ ಪರಾಮರ್ಶೆಗಾಗಿ ಎ.27ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಈ ಸಭೆ ನಾಳೆ ನಡೆಯಲಿದ್ದು, ಎಲ್ಲರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಲಾಕ್ಡೌನ್ ಜಾರಿಯಾದ ಬಳಿಕ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೂರನೇ ಸಭೆ ಇದಾಗಿದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು, ಇನ್ನು ಮುಂದೆ ಕೈಗೊಳ್ಳಬೇಕಾದ ಕ್ರಮಗಳು, ಲಾಕ್ಡೌನ್ನ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಸಿಗಬೇಕಾದ ಅನುದಾನಗಳ ಬಗ್ಗೆ ಈ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಈಗಾಗಲೇ ಕೇಂದ್ರದಿಂದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಅನುದಾನ, ಜಿಎಸ್ಟಿ ಪಾಲು ಕೇಳಿದ್ದಾರೆ. ಅಲ್ಲದೇ, ಅನುದಾನ ಪ್ಯಾಕೇಜ್ ಇಲ್ಲದೆ ಕೊರೊನಾ ವಿರುದ್ದ ಹೋರಾಡಿದರೆ ಸಫಲವಾಗುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ವ್ಯಾಪಕ ಲಾಕ್ಡೌನ್ನಿಂದಾಗಿ ವಾಣಿಜ್ಯ ಚಟುವಟಿಕೆಗಳು ಸಾಗದೇ ಎಲ್ಲಾ ರಾಜ್ಯಗಳೂ ನಷ್ಟಕ್ಕೆ ಸಿಲುಕಿದ್ದು, ಹಾಗಾಗಿ, ಲಾಕ್ಡೌನ್ ಜಾರಿ ವಿಧಾನದ ಬಗ್ಗೆ ರಾಜ್ಯಗಳು ಆಕ್ಷೇಪವೆತ್ತುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಸೋಂಕು ಹೆಚ್ಚು ವ್ಯಾಪಿಸುತ್ತಿರುವ ಪ್ರಪ್ರದೇಶ, ಜಿಲ್ಲೆಗಳನ್ನು ಹೊರತುಪಡಿಸಿ, ಬೇರೆ ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವು ಮಾಡುವಂತೆಯೂ ಒತ್ತಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.