ಬೆಂಗಳೂರು, ಎ.26 (DaijiworldNews/PY) : ಲಂಡನ್ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಬಿಎಸ್ವೈ ಅವರು ಭಾನುವಾರ ಕೊರೊನಾಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಈ ಸಂದರ್ಭ ಕೌನ್ಸಿಲರ್ ವೆಸ್ಟ್ ಸ್ವಿಂಡನ್ ಟ್ರಸ್ಟಿ ಆಫ್ ಹಿಂದೂ ಟೆಂಪಲ್, ಲಾರ್ಡ್ ಚಾನ್ಸಲರ್ ಮತ್ತು ಸೆಕ್ರೆಟರಿ ಆಫ್ ಫಾರ್ ಜಸ್ಟೀಸ್, ಮೆಂಬರ್ ಆಫ್ ಪಾರ್ಲಿಮೆಂಟ್ ರಾಬರ್ಟ್ ಬಕ್ಲಂಡ್, ಸುರೇಶ್ ಗತ್ತಾಪುರ ಹಾಗೂ ಶರವಣ ಗುರುಮೂರ್ತಿ ಸೇರಿದಂತೆ ಹಲವು ಯುಕೆ ಕನ್ನಡ ಬಳಗದ ಸದಸ್ಯರು ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.
ಕೊರೊನ ಹರಡುತ್ತಿರುವ ಬಗ್ಗೆ ಹಾಗೂ ಯಾವ ರೀತಿ ಅದನ್ನು ನಿಭಾಯಿಸುತ್ತಿದ್ದೇವೆ ಎನ್ನುವುದನ್ನು ಲಂಡನ್ ಕಾನೂನು ಮಂತ್ರಿ ರಾಬರ್ಟ್ ಬಕ್ಲಂಡ್ ಅವರು ವಿವರಿಸಿದರು. ಅಲ್ಲದೇ, ಕೊರೊನಾ ನಿಯಂತ್ರಣ ಮಾಡುವಲ್ಲಿ ಕರ್ನಾಟಕದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘಿಸಿದರು.
ಶರವಣ ಗುರುಮೂರ್ತಿ ಈ ಸಂದರ್ಭ ಮಾತನಾಡಿದ್ದು, ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಇಲ್ಲಿಗೆ ಸಾಲ ತೆಗೆದುಕೊಂಡು ಬಂದಿದ್ದು, ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.
ಸಿಎಂ ಬಿಎಸ್ವೈ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಇಎಂಐ ಕಟ್ಟಲು ಸಮಯಾವಕಾಶ ಕೊಡಿಸುವುದಾಗಿ ತಿಳಿಸಿದರು.