ಚೆನ್ನೈ, ಎ.27 (Daijiworld News/MB) : ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಕೆಲವು ಕಡೆಗಳಲ್ಲಿ ಅಡ್ಡಿಪಡಿಸುತ್ತಿರುವ ಈ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯ ಪ್ರಕಾರವಾಗಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಗ್ಯಾರಂಟಿ ಎಂದು ವರದಿ ತಿಳಿಸಿದೆ.
ತಮಿಳುನಾಡಿನ ಚೆನ್ನೈನಲ್ಲಿ ಕಳೆದ ವಾರ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಅವರ ಅಂತ್ಯ ಸಂಸ್ಕಾರ ಮಾಡಲು ತಡೆದ ಗುಂಪೊಂದು ಆಂಬುಲೆನ್ಸ್ ಮೇಲೆಯೇ ದಾಳಿ ನಡೆಸಿತ್ತು. ಅಷ್ಟು ಮಾತ್ರವಲ್ಲದೆ ಸ್ಥಳೀಯರು ಇಟ್ಟಿಗೆ, ಕಲ್ಲು, ಬಾಟಲ್ಗಳನ್ನು ಎಸೆದಿದ್ದರು. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕರು, ಕಾರ್ಪೋರೇಷನ್ ಆರೋಗ್ಯ ಅಧಿಕಾರಿಗಳು ಗಾಯಗೊಂಡಿದ್ದರು. ಕೊನೆಗೆ ವೈದ್ಯರು ಇಬ್ಬರು ವಾರ್ಡ್ ಸಿಬ್ಬಂದಿಗಳ ಜೊತೆ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಆ ಬಳಿಕ ಮದ್ರಾಸ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಡಾ.ಸೈಮನ್ ಅವರ ಶವದ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸುವುದು ಹಕ್ಕು ಎಂದು ತೀರ್ಮಾನಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಆ ಬಳಿಕ ತಮಿಳು ನಾಡು ರಾಜ್ಯ ಸರ್ಕಾರವು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುವುದು ಎಂದು ಕಾಯ್ದೆ ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿತು.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ 50 ಲಕ್ಷ ಪರಿಹಾರ ಹಾಗೂ ಯಾರು ಕೊರೊನಾದಿಂದ ಸಾವನ್ನಪ್ಪುತ್ತಾರೋ ಅವರ ಶವದ ಗೌರವಯುತ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಭರವಸೆ ನೀಡಿದ್ದಾರೆ.