ಮುಂಬೈ, ಎ.27 (Daijiworld News/MB) : ಮುಸ್ಲಿಂ ಸಮುದಾಯದ ಕೆಲವರು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಅಕ್ಷಯ ತೃತೀಯ ಅಂಗವಾಗಿ ನಾಗ್ಪುರದಿಂದ ಆನ್ ಲೈನ್ ಮೂಲಕ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಯಾರೂ ಕೂಡಾ ಜಾತಿ, ಧರ್ಮ ಭೇದ ಮಾಡಬಾರದು. ಎಲ್ಲರೂ ಎಲ್ಲರಿಗೂ ಸಹಾಯವಾಗಬೇಕು. ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರಿಂದ ಕೊರೊನಾ ಹರಡಿದ ಕಾರಣಕ್ಕೆ ಆ ಸಮುದಾಯದ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರಿ, ಅವರು ಸರಿಯಿಲ್ಲ ಎಂದು ಹೇಳಬಾರದು ಎಂದು ಹೇಳಿದರು.
ಭಾರತೀಯರಾದ ನಾವೆಲ್ಲರೂ ಒಂದೇ, ಭಾರತದ 130 ಕೋಟಿ ಜನರು ನಮ್ಮ ಕುಟುಂಬ. ಒಂದೇ ಸಮುದಾಯವನ್ನು ದೂರುತ್ತಿರುವ ಈ ಸಂದರ್ಭದಲ್ಲಿ ಎರಡು ಸಮುದಾಯದ ಮುಖಂಡರು ಮಾತುಕತೆ ನಡೆಸಿ ಪೂರ್ವಾಗ್ರಹ ಪೀಡಿತರಾಗಿರುವ ಜನರಿಗೆ ತಿಳಿ ಹೇಳಬೇಕು ಎಂದು ಅಭಿಪ್ರಾಯಪಟ್ಟರು.
ಕೊರೊನಾ ಸೋಂಕಿನಿಂದ ಲಾಕ್ಡೌನ್ ಮಾಡಲಾಗಿದ್ದು ಜನರು ಸಂಕಷ್ಟದಲ್ಲಿ ಇದ್ದಾರೆ. ಹಾಗಾಗಿ ಆರ್ಎಸ್ಎಸ್ನಿಂದ ಜನರಿಗೆ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಪಲ್ಗಾರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಸಾಧುಗಳ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಗಾಳಿ ಮಾತುಗಳಿಂದ ಮುಗ್ಧ ಜನರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ಆ ಇಬ್ಬರು ಸಾಧುಗಳು ಮುಗ್ಧರಾಗಿದ್ದರು ಎಂದು ಹೇಳಿದರು.