ಬೆಂಗಳೂರು, ಏ 27 (Daijiworld News/MSP): ಪಾದರಾಯನಪುರ ಪುಂಡರ ಗಲಾಟೆ ಪೊಲೀಸರಿಗೂ ಕಂಟಕವಾಗಿ ಪರಿಣಮಿಸಿದ್ದು, ಮತ್ತೆ 25 ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಒಟ್ಟಾರೆ ಪಾದರಾಯನಪುರದ ಪುಂಡರ ಗಲಭೆಯಿಂದ ಒಟ್ಟು 48 ಸಿಬ್ಭಂದಿಗಳು ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಬಂಧಿತ ಪಾದಾರಾಯನಪುರ ಐವರಲ್ಲಿ ಸೋಂಕು ಇರುವುದು ಖಚಿತವಾಗಿತ್ತು. ಹೀಗಾಗಿ ಮತ್ತೆ 25 ಪೊಲೀಸ್ ಸಿಬ್ಭಂದಿಗಳನ್ನು ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಇವರು ಗಲಭೆ ನಡೆದ ಪ್ರದೇಶ, ಪುಂಡರ ಬಂಧನ, ವಿಚಾರಣೆಯ ಕರ್ತವ್ಯದಲ್ಲಿದ್ದರು. ಇದಕ್ಕೂ ಮೊದಲು 23 ಪೊಲೀಸರನ್ನು ಕ್ವಾರಂಟೈನ್ಗೆ ಕಳುಹಿಸಲಾಗಿತ್ತು.
ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 160 ಪೊಲೀಸರಿಗೆ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಕೋವಿಡ್ -19 ಪರೀಕ್ಷೆ ನಡೆಸಲಾಗಿದೆ. ಬಳಿಕ ಗಾಂಧಿನಗರದ ಹೋಟೆಲ್ನಲ್ಲಿ 23 ಜನರಿಗೆ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.
ಕಳೆದ ಭಾನುವಾರ ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೋದಾಗ ಪಾದರಾಯನಪುರದಲ್ಲಿ ಗಲಾಟೆ ನಡೆದಿತ್ತು. ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 126ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.
.