ಬೆಂಗಳೂರು, ಎ.27 (DaijiworldNews/PY) : ಲಾಕ್ ಡೌನ್ ತೆಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕಯ್ಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ 'ಕಾಸ್ಟ್ ಆಫ್ ಲಿವಿಂಗ್' ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ ಎಂದು ತಿಳಿಸಿದ್ದಾರೆ.
ಈ ಹಠಾತ್ ಶಾಕ್ ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು/ಕಾಲೇಜುಗಳ ಫೀಸ್ ಕಡಿತ, ವಿದ್ಯುತ್ ಬಿಲ್ ಕಡಿತ, ಪೆಟ್ರೋಲ್/ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ ಎಂದಿದ್ದಾರೆ.
ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಹೀಗಾಗಿ ಸರಕಾರ ಜನಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗುವುದರರಿಂದ ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆಯನ್ನು ಸಂಗ್ರಹಿಸಲಿ ಎಂದು ಹೇಳಿದ್ದಾರೆ.
ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.