ನವದೆಹಲಿ, ಎ.27 (Daijiworld News/MB) : ಕೊರೊನಾ ವೈರಸ್ ನಿಯಂತ್ರಿಸಲು ಮೇ 3ರ ಬಳಿಕವೂ ನಮ್ಮ ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಸುತ್ತೇವೆ. ಮೇ 16 ವರೆಗೂ ನಮ್ಮ ರಾಜ್ಯಗಳಲ್ಲಿ ಲಾಕ್ಡೌನ್ ಮುಂದುವರಿಸಲು ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಘಾಲಯ ಮತ್ತು ಮಿಜೋರಾಂ ಮುಖ್ಯಂತ್ರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ಮುಂದುವರಿಸಿದ್ದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಒಬ್ಬೊಬ್ಬರಾಗಿ ಲಾಕ್ಡೌನ್ ಕುರಿತಾಗಿ ಹಾಗೂ ತಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವ ಕ್ರಮದ ಕುರಿತಾಗಿ ಚರ್ಚೆ ನಡೆಸುತ್ತಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾದ ಬಳಿಕ ಇದು ಮೂರನೇ ಬಾರಿಗೆ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ನಲ್ಲಿ ಚರ್ಚೆ ನಡೆಸುತ್ತಿದ್ದು ಮೇ ಮೂರವರೆಗೆ ಲಾಕ್ಡೌನ್ ವಿಸ್ತರಣೆ ಮಾಡುವ ಮುನ್ನ ಏಪ್ರಿಲ್ 11ರಂದು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು ಆ ಸಂದರ್ಭದಲ್ಲಿ ಬಹುತೇಕ ರಾಜ್ಯಗಳು ಲಾಕ್ಡೌನ್ ಮುಂದುವರಿಸುವಂತೆ ಮನವಿ ಮಾಡಿತ್ತು.
ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಬೇರೆ ದೇಶಗಳಿಗಿಂತ ನಮ್ಮಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಿದೆ. ಹಾಗೆಂದು ನಾವು ಯಾರೂ ಕೂಡಾ ಲಾಕ್ಡೌನ್ ನಿಯಮ ಉಲ್ಲಂಘಿಸಬಾರದು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಸಚಿವರಾದ ಕೆ.ಸುಧಾಕರ್, ಬಸವರಾಜ ಬೊಮ್ಮಯಿ ಅವರು ಕೂಡಾ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಭಾಗಿಯಾಗಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ನಾವು ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡುತ್ತೇವೆ ಎಂದು ಪ್ರಧಾನಿಗೆ ತಿಳಿಸಿದ್ದಾರೆ
ಇನ್ನು ಕೇರಳ ಸರ್ಕಾರವು ತನ್ನ ಸಲಹೆಗಳನ್ನು ಕೇಂದ್ರಕ್ಕೆ ಲಿಖಿತ ರೂಪದಲ್ಲಿ ನೀಡಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಡಿಯೊ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿಲ್ಲ. ಬದಲಾಗಿ ಕೇರಳ ಮುಖ್ಯ ಕಾರ್ಯದರ್ಶಿ ಕಾನ್ಫರನ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.