ಚಿತ್ರದುರ್ಗ, ಎ.27 (DaijiworldNews/PY) : ಬಡವರಿಗೆ ಆಹಾರ ತಲುಪಿಸುವಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದು ಬೇಡ ಎಂದು ಬೈರತಿ ಬಸವರಾಜ್ ಹೇಳಿದ್ದಾರೆ.
ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಡವರಿಗೆ ಆಹಾರ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಬಡವರ ಅನ್ನಕ್ಕೆ ಕೈ ಹಾಕುವುದಿಲ್ಲ. ಡಿ.ಕೆ.ಶಿವಕುಮಾರ್ ಅವರೊಂದಿಗೆ ದಾಖಲೆಯಿದ್ದರೆ ಬಹಿರಂಗಪಡಿಸಲಿ ಎಂದು ತಿಳಿಸಿದರು.
ಪಾದರಾಯನಪುರ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆರೋಪಿಗಳನ್ನು ಭದ್ರತಾ ದೃಷ್ಟಿಯಿಂದ ರಾಮನಗರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲದೇ ರಾಮನಗರದ ವಾತಾವರಣವನ್ನು ಕೆಡಿಸುವ ಯಾವುದೇ ದುರುದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದರು.