ನವೆದೆಹಲಿ, ಎ.27 (Daijiworld News/MB) : ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದಾಗಿ ಆರ್ಥಿಕ ವ್ಯವಸ್ಥೆ ಮತ್ತಷ್ಟು ಬಿಕ್ಕಟ್ಟಿನಲ್ಲಿದ್ದು ಆರ್ಥಿಕ ಮಾರುಕಟ್ಟಯಲ್ಲಿ ಮ್ಯೂಚುವಲ್ ಫಂಡ್ಗಳ ಉಬ್ಬರವಿಳಿತಕ್ಕೆ ಸಹಾಯ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 50,000 ಕೋಟಿ ರೂ.ಗಳವರೆಗೆ ವಿಶೇಷ ದ್ರವ್ಯತೆ ಸೌಲಭ್ಯವನ್ನು ಸೋಮವಾರ ಪ್ರಕಟಿಸಿದೆ.
ಗುರುವಾರ ಅಮೆರಿಕದ ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ದ್ರವ್ಯತೆಯ ಕೊರತೆಯಿಂದಾಗಿ ಆರು ಕ್ರೆಡಿಟ್ ಫಂಡ್ಗಳನ್ನು ಮುಚ್ಚುವುದಾಗಿ ಹೇಳಿತ್ತು. ಹಾಗೆಯೇ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮ್ಯೂಚುವಲ್ ಫಂಡ್ ವಲಯದಲ್ಲಿ ಹೂಡಿಕೆ ಹಿಂಪಡೆಯುವ ಒತ್ತವು ಕೂಡಾ ಹೆಚ್ಚಾಗಿತ್ತು.
ಈ ಕಾರಣದಿಂದಾಗಿ ಆತಂಕದಲ್ಲಿರುವ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮಕೈಗೊಂಡಿದೆ.
90 ದಿನಗಳ ರೆಪೊ ಕಾರ್ಯಾಚರಣೆಯನ್ನು ನಿಗದಿತ ರೆಪೊ ದರದಲ್ಲಿ (ಹಣಕಾಸು ಸಂಸ್ಥೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ನಡೆಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಮೇ 11 ರವರೆಗೆ ಅಥವಾ ನಿಗದಿತ ಮೊತ್ತ ಸಂಪೂರ್ಣ ಬಳಕೆಯಾಗುವವರೆಗೂ ಲಭ್ಯವಿರುತ್ತದೆ ಎಂದು ಆರ್ಬಿಐ ತಿಳಿಸಿದೆ.
ಆರ್ಬಿಐ ತೆಗೆದುಕೊಂಡಿರುವ ಈ ನಿರ್ಧಾರವನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ ಹಲವು ಆರ್ಥಿಕ ತಜ್ಞರು ಶ್ಲಾಘಿಸಿದ್ದಾರೆ.