ನವದೆಹಲಿ, ಎ.27 (DaijiworldNews/PY) : ಕೇಂದ್ರ ಸರ್ಕಾರ ಕೂಡಲೇ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಎದುರಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಅವರು ಮನವಿ ಮಾಡಿದ್ದಾರೆ.
ತನ್ನ ಆರು ಸಾಲ ನಿಧಿ ಯೋಜನೆಗಳನ್ನು ಫ್ರ್ಯಾಂಕ್ಲಿನ್ ಟೆಂಪಲ್ಟನ್ ಸಂಸ್ಥೆಯು ದಿಢೀರನೆ ರದ್ದುಪಡಿಸಿರುವ ತೀರ್ಮಾನವು ಉದ್ಯಮ, ಮಾರುಕಟ್ಟೆ ಹಾಗೂ ಹೂಡಿಕೆದಾರರಿಗೆ ಅತ್ಯಂತ ಕಳವಳಕರಿಯಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ವಹಿವಾಟಿಗೆ ಶನಿವಾರ ಹಾಗೂ ಭಾನುವಾರ ರಜೆ ಇರುವುದು ಅದೃಷ್ಟದ ವಿಷಯ. ಕೂಡಲೇ ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸುತ್ತೆ ಎಂಬ ನಿರೀಕ್ಷೆಯಿದೆ ಎಂದರು.
ಇದೇ ರೀತಿಯಾದ ಪರಿಸ್ಥಿತಿಯು ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದ ವೇಳೆಯಲ್ಲಿ ನಿರ್ಮಾಣವಾಗಿದ್ದು, ನಗದು ಬಿಕ್ಕಟ್ಟನ್ನು ಮ್ಯೂಚುವಲದ್ ಫಂಡ್ ಕಂಪೆನಿಗಳು ಎದುರಿಸಿದ್ದವು. ಆರ್ಬಿಐ, ಸೆಬಿ, ಬ್ಯಾಂಕ್ಗಳ ಒಕ್ಕೂಟ, ಮ್ಯೂಚುವಲ್ ಫಂಡ್ ಕಂಪನಿಗಳು ಮತ್ತು ಇನ್ನೂ ಹಲವರ ಸಲಹೆಯನ್ನು ಆ ಸಂದರ್ಭ ಕೇಂದ್ರ ಸರ್ಕಾರವು ತೆಗೆದುಕೊಂಡಿತ್ತು. ಅಲ್ಲದೇ, ಹಣಕಾಸು ಸ್ಥಿರತೆ ಹಾಗೂ ಅಭಿವೃದ್ದಿ ಸಮಿತಿಯ ತುರ್ತು ಸಭೆಯನ್ನು ಕರೆದು ದಿನಾಂತ್ಯದೊಳಗೆ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲಾಗಿತ್ತು ಎಂದು ತಿಳಿಸಿದರು.