ಬೆಂಗಳೂರು, ಏ 27 (Daijiworld News/MSP): ಸಂಸದ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಟ್ವೀಟರ್ ಖಾತೆ ಬ್ಲಾಕ್ ಆಗಿದ್ದು, ಟ್ವಿಟರ್ ಕಂಪನಿಯ ಈ ನಿರ್ಧಾರಕ್ಕೆ ಹೆಗಡೆ ಫೇಸ್ಬುಕ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಭಾರತ ವಿರೋಧಿ ನೀತಿ ಅನುಸರಿಸುತ್ತಿದೆ. ತಬ್ಲೀಘಿ ಜಮಾತ್ ವಿರುದ್ದ ಟ್ವೀಟ್ ಅಳಿಸಿದರೆ ಮತ್ತೆ ಅಕೌಂಟ್ ಸಕ್ರಿಯಗೊಳಿಸುವುದಾಗಿ ತಿಳಿಸಿದೆ. ನನ್ನ ದೇಶ , ನನ್ನ ಸಿದ್ದಾಂತ ನನ್ನ ಜೀವನದ ಆದ್ಯತೆ. ಟ್ವೀಟ್ ಅಳಿಸುವ ಪ್ರಶ್ನೆಯೇ ಇಲ್ಲ. ತಬ್ಲೀಘಿಗಳ ಬಣ್ಣ ಬಯಲು ಮಾಡಿದಕ್ಕೆ ನನ್ನ ಟ್ವಿಟ್ಟರ್ ಖಾತೆ ಬ್ಲಾಕ್ ಆಯ್ತು..! ಸೌದಿ ಶೇಖ್ ಗಳ ತಾಳಕ್ಕೆ ಜಾಕ್ ಡೋರ್ಸೆ ಕುಣಿಯುವುದು ಖಚಿತವಾಯ್ತು..! ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟ್ವಿಟರ್ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ. ಭಾರತಕ್ಕೆ ವಿರುದ್ದವಾಗಿರುವ ರಾಷ್ಟ್ರ ವಿರೋಧಿ ಹಾಗೂ ಸಮಾಜವಿರೋಧಿ ಶಕ್ತಿಗಳ ಜಾಹೀರಾತು ಆದಾಯ ಸಂಗ್ರಹಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ತಬ್ಲೀಘಿ ಜಮಾತ್ ರಹಸ್ಯ ಕಾರ್ಯಸೂಚಿ ಕುರಿತು ಟ್ವಿಟ್ ಹಾಗೂ ಕೆಲ ದಿನಗಳ ಹಿಂದೆ ಗುರು ಪಟ್ವಂತ್ ಸಿಂಗ್ ಪನ್ನೂನ್ ಎಂಬ ಖಾತೆಯಿಂದ ಮಾಡಲಾದ ದೇಶವಿರೋಧಿ, ಸಮಾಜವಿರೋಧಿ ಪ್ರಧಾನಿ, ಹಾಗೂ ಕೇಂದ್ರ ಗೃಹಸಚಿವರಿಗೆ ಲಿಖಿತ ದೂರು ನೀಡಿದ್ದೆ. ಈ ಎರಡು ಟ್ವೀಟ್ ಗಳಿಂದಾಗಿ ಏ.೨೪ ರಂದು ಟ್ವಿಟರ್ ನನ್ನ ಖಾತೆಯನ್ನು ಅಳಿಸಿದ್ದು ತಬ್ಲೀಘಿ ಟ್ವೀಟ್ ಡಿಲೀಟ್ ಮಾಡಿದ್ರೆ ಮತ್ತೆ ಖಾತೆ ಸಕ್ರಿಯಗೊಳಿಸಿವುದಾಗಿ ಹೇಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.