ಬೆಂಗಳೂರು, ಎ.27 (DaijiworldNews/PY) : ಲಾಕ್ಡೌನ್ನಿಂದಾಗಿ ತರಕಾರಿ, ಹೂವು, ಹಣ್ಣು ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ವಿಶೇಷ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಸಿಎಂ ಬಿಎಸ್ವೈ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಸೋಮವಾರ ಈ ವಿಚಾರವಾಗಿ ಸಿಎಂ ಬಿಎಸ್ವೈ ಅವರಿಗೆ ಎಚ್.ಡಿ.ದೇವೆಗೌಡ ಅವರು ಪತ್ರ ಬರೆದಿದ್ದು, ರಾಜ್ಯದಲ್ಲಿ ಲಾಕ್ಡೌನ್ ಜಾರಿ ಆಗಿ ಒಂದು ತಿಂಗಳಾಗಿದೆ. ಸಂಘಟಿತ ಹಾಗೂ ಅಸಂಘಟಿತ ವಲಯುದ ಕೂಲಿ ಕಾರ್ಮಿಕರು ಈ ಸಂದರ್ಭ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಲಾಕ್ಡೌನ್ನಿಂದಾಗಿ ಹೆಚ್ಚು ತೊಂದರೆಗೆ ಒಳಗಾಗದವರು ರೈತಾಪಿ ಸಮುದಾಯದವರು. ಅದರಲ್ಲಿಯೂ ತರಕಾರಿ, ಹೂವು, ಹಣ್ಣು ಬೆಳೆದ ರೈತರು ಕಣ್ಣೀರಿಡುವಂತಾಗಿದೆ. ಅತ್ತ ಬೇರೆ ರಾಜ್ಯ ಹಾಗೂ ದೇಶಗಳಿಗೆ ರಫ್ತು ಸಾಧ್ಯವಾಗುತ್ತಿಲ್ಲ, ಇತ್ತ ಮಾರಾಟಕ್ಕೆ ಸ್ಥಳೀಯ ಮಾರುಕಟ್ಟೆಯೂ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾಗಾಗಿ ಸಮೀಕ್ಷೆ ಮಾಡಿ, ಲಾಕ್ಡೌನ್ನಿಂದಾಗಿ ನಷ್ಟವಾಗಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು. ಬಜೆಟ್ನಲ್ಲಿ ಘೋಷಣೆ ಮಾಡಿರುವ ಹಲವಾರು ಯೋಜನೆಗಳನ್ನು ಕೈ ಬಿಟ್ಟರೂ ಅನ್ನದಾತನ ಕೈ ಬಿಡಬೇಡಿ. ಹಾಲು ಖರೀದಿ ಮಾಡಿ ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಹಾಲು ಉತ್ಪಾದಕರಿಗೆ ನೆರವಾಗಿದ್ದೀರಿ. ಇದಕ್ಕೆ ತಮಗೆ ಧನ್ಯವಾದ ಸಲ್ಲಿಸುವುದಾಗಿ ಪತ್ರದಲ್ಲಿ ಬರೆದಿದ್ದಾರೆ.
ಒಂದು ವೇಳೆ ಸರ್ಕಾರ ನೆರವಿಗೆ ಧಾವಿಸದೇ ಇದ್ದಲ್ಲಿ, ಜಮೀನನ್ನು ಮಾರಿ ಕೃಷಿಯನ್ನು ಕೈ ಬಿಟ್ಟು ಬಿಡುವ ಪರಿಸ್ಥಿತಿಗೆ ರೈತರು ಬರಬೇಕಾಗುತ್ತದೆ. ಮಾವು ಮಾರಾಟಕ್ಕೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಟ್ಟು, ರಫ್ತು ಮಾಡಲು ಕ್ರಮ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರವ ನೆರವಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.