ನವದೆಹಲಿ, ಎ.27 (DaijiworldNews/PY) : ಹಾಟ್ ಸ್ಪಾಟ್ ಎಂದು ಘೋಷಣೆಯಾಗಿರುವ ಪ್ರದೇಶಗಳಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೋಮವಾರ ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅಮಿತ್ ಶಾ ಅವರೂ ಪಾಲ್ಗೊಂಡಿದ್ದು, ನಿಯಮ ಪಾಲನೆ ವಿಚಾರವಾಗಿ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಹಾಗಾಗಿ, ಕಠಿಣವಾದ ನಿಯಮಗಳನ್ನು ಜಾರಿ ಮಾಡುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಕೊರೊನಾ ಬಿಕ್ಕಟ್ಟಿನ ಸಂದರ್ಭ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಎಲ್ಲಾ ಮುಖ್ಯಮಂತ್ರಿಗಳು ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ, ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ವೈದ್ಯರು, ಪೊಲೀಸರಿಗೆ ಅಮಿತ್ ಶಾ ಅವರು ಅಭಿನಂದನೆ ಸಲ್ಲಿಸಿದರು.
ಆರ್ಥಿಕ ಸವಾಲುಗಳನ್ನು ನಿಭಾಯಿಸುವುದು, ಅಂತರಾಷ್ಟ್ರೀಯ ಗಡಿಗಳಲ್ಲಿ ಜಾಗರೂಕತೆ ವಹಿಸುವ ಅಗತ್ಯತೆಗಳ ವಿಚಾರ ಹಾಗೂ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ವಿಚಾರವಾಗಿ ಅಮಿತ್ ಶಾ ಅವರ ಸಭೆಯಲ್ಲಿ ತಿಳಿಸಿದರು.