ವಡೋದರ, ಎ.27 (DaijiworldNews/PY) : ಆನ್ಲೈನ್ ಲೂಡೋ ಗೆಮ್ನಲ್ಲಿ ಪತ್ನಿ ನಿರಂತರವಾಗಿ ಸೋಲಿಸಿದ್ದ ಕಾರಣ ಕೋಪಗೊಂಡ ಪತಿ ಆಕೆಗೆ ಥಳಿಸಿದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.
ಈ ದಂಪತಿ ವಡೋದರದ ವೆಮಲಿ ಎಂಬ ಪ್ರದೇಶದಲ್ಲಿ ವಾಸವಾಗಿದ್ದರು. ಪತ್ನಿಯು ಟ್ಯೂಷನ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಮನೆಯಿಂದ ಹೊರಗೆ ಯಾರೂ ಹೋಗುವಂತಿಲ್ಲ. ಹಾಗಾಗಿ ಮನೆಯಲ್ಲೇ ಇದ್ದ ಪತಿ - ಪತ್ನಿ ಸಮಯ ಕಳೆಯುವ ಸಲುವಾಗಿ ಆನ್ಲೈನ್ ಗೇಮ್ನ ಮೊರೆ ಹೋಗಿದ್ದಾರೆ. ಬಳಿಕ ಇಬ್ಬರು ಲೂಡೋ ಆಡುವ ನಿರ್ಧಾರ ಮಾಡಿದ್ದು, ಇಬ್ಬರೂ ಆಟದಲ್ಲಿ ತಲ್ಲೀನರಾಗಿದ್ದಾರೆ. ಹೀಗೆ ಆಡುತ್ತಾ, ಪತ್ನಿ ಆಟದಲ್ಲಿ ಪತಿಯನ್ನು ನಿರಂತರವಾಗಿ ಸೋಲಿಸುತ್ತಾ ಬಂದಿದ್ದು, ಇದರಿಂದ ಕೋಪಗೊಂಡ ಪತಿ ಪತ್ನಿಯೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಪತಿಯ ಕೋಪ ತಾರಕಕ್ಕೇರಿ ಪತ್ನಯ ಮೇಲೆ ಹಲ್ಲೆ ಮಾಡಿದ್ದಾನೆ.
ಪತಿ ಪತ್ನಿಯ ಮೇಲೆ ಹಲ್ಲೆ ಮಾಡಿದ ಪರಿಣಾಮ ಪತ್ನಿಯ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಕೌನ್ಸಿಲಿಂಗ್ ನಡೆದಿದ್ದು, ಆಕೆ ನಾನು ಪತಿಯ ಮನೆಗೆ ಹೋಗುವುದಿಲ್ಲ. ತಾಯಿ ಮನೆಗೆ ಹೋಗುತ್ತೇನೆ. ಆದರೆ, ತಾಯಿ ಮನೆಗೆ ಹೋಗುವ ಮುನ್ನ ಪತಿಯ ಮನೆಯಲ್ಲಿ ಕೆಲವು ದಾಖಲೆಗಳಿವೆ. ಅವುಗಳು ತನಗೆ ಬೇಕೆಂದು ಹೇಳಿದ್ದಾರೆ. ಬಳಿಕ ಇಬ್ಬರನ್ನೂ ಕೌನ್ಸಿಲಿಂಗ್ ಮಾಡಲಾಗಿದ್ದು, ಈ ಸಂದರ್ಭ ಇಬ್ಬರಿಗೂ ಕೌನ್ಸಿಲರ್ ಎರಡು ಆಯ್ಕೆಗಳನ್ನು ನೀಡಿದ್ದು, ಒಂದು ಆಯ್ಕೆ ಪ್ರಕರಣ ದಾಖಲಿಸುವುದಾದರೆ, ಮತ್ತೊಂದು ಆಯ್ಕೆ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿದೆ.
ಕೊನೆಗೆ ಆರೋಪಿ ಪತಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಪತಿಯ ಬಳಿ ಕ್ಷಮೆ ಯಾಚಿಸಿದ್ದಾನೆ. ಹಾಗಾಗಿ ಪತ್ನಿ ಪತಿಯ ವಿರುದ್ದ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು, ರಾಜಿ ಮಾಡಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿದಿದೆ. ಸದ್ಯ ಆಕೆ ತಾಯಿಯ ಮನೆಗೆ ಹೋಗಿದ್ದು, ಗುಣವಾದ ನಂತರ ಪತಿಯ ಮನೆಗೆ ಹೋಗುವುದಾಗಿ ತಿಳಿಸಿದ್ದಾಳೆ.