ನವದೆಹಲಿ,ಎ.28 (Daijiworld News/MB) : ನ್ಯಾಯಾಂಗವು ಸರ್ಕಾರದ ಒತ್ತೆಯಾಳಲ್ಲ ಎಂದು ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ದೇಶದಾದ್ಯಂತ ಸಿಲುಕಿರುವ ವಲಸೆ ಕಾರ್ಮಿಕರ ಕೊರೊನಾ ವೈರಸ್ ಪರೀಕ್ಷೆ ನಡೆಸಿದ ಬಳಿಕ ಅವರನ್ನು ತಮ್ಮ ಗ್ರಾಮಕ್ಕೆ ತೆರಳಲು ಅವಕಾಶ ನೀಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠವು ನಡೆಸಿತು.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, ಜನರ ಅದರಲ್ಲೂ ಮುಖ್ಯವಾಗಿ ವಲಸೆ ಕಾರ್ಮಿಕರ ಮೂಲಭೂತ ಹಕ್ಕುಗಳು ಜಾರಿಯಾಗುತ್ತಿಲ್ಲ. ಸರ್ಕಾರದ ದೃಷ್ಟಿಕೋನವನ್ನು ಪರಿಶೀಲನೆ ನಡೆಸದೆ ಕುರುಡಾಗಿ ನೋಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಆಕ್ರೋಶಗೊಂಡ ಸುಪ್ರೀಂ ಕೋರ್ಟ್, ನಿಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿದ್ದಲ್ಲಿ ನಿಮ್ಮ ವಾದವನ್ನು ಇಲ್ಲಿ ಯಾಕೆ ಹೇಳಬೇಕು ಎಂದು ಪ್ರಶ್ನಿಸಿದ್ದು ನ್ಯಾಯಾಂಗವು ಸರ್ಕಾರದ ಒತ್ತೆಯಾಳಲ್ಲ ಎಂದು ಕಿಡಿಕಾರಿದರು.
ನ್ಯಾಯಾಂಗವು ಸಾಂವಿಧಾನಿಕವಾಗಿ ರೂಪಿತವಾದ ವ್ಯವಸ್ಥೆ, ವಲಸೆ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನನಗೆ ಇದೆ. ಕೇಂದ್ರ ಸರ್ಕಾರವು ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಚಿಂತನೆ ನಡೆಸುತ್ತಿಲ್ಲ. ಶೇ.90 ರಷ್ಟು ಕಾರ್ಮಿಕರಿಗೆ ವೇತನ, ಪಡಿತರ ದೊರೆತಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹೋಗಲು ಅನುಮತಿ ನೀಡಬೇಕು ಎಂದು ಭೂಷಣ್ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರ್ಕಾರಕ್ಕೆ ವಲಸೆ ಕಾರ್ಮಿಕರ ಬಗ್ಗೆ ಕಾಳಜಿಯಿದೆ. ಅವರಿಗೆ ಅಗತ್ಯವಿರುವ ಸಹಾಯ ಮಾಡುವ ಪ್ರಯತ್ನ ನಡೆಸುತ್ತಿದೆ. ಈ ಕುರಿತಾಗಿ ಈಗಾಗಲೇ ಎಲ್ಲಾ ರಾಜ್ಯಗಳ ಬಳಿ ಚರ್ಚೆ ನಡೆಸಲಾಗಿದೆ. ಪ್ರಶಾಂತ್ ಅವರು ತಮ್ಮ ಅರ್ಜಿದಾರರ ಪರ ವಾದ ಮಾಡುತ್ತಾ ತಪ್ಪಾದ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗೆಯೇ ಈ ಕುರಿತಾಗಿ ಸರ್ಕಾರಕ್ಕೆ ಯಾವುದೇ ನಿರ್ದೇಶನ ಹಾಗೂ ನೋಟಿಸ್ ನೀಡಬಾರದು ಎಂದು ಕೋರಿದ್ದು ಸರ್ಕಾರಕ್ಕೆ ಒಂದು ವಾರಗಳ ಕಾಲವಕಾಶ ನೀಡುವುದಾಗಿ ಪೀಠ ತಿಳಿಸಿದೆ.