ಬೆಂಗಳೂರು, ಏ 28 (Daijiworld News/MSP): ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಇಂದು 8 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಮಾಧ್ಯಮ ಪ್ರಕಟಣೆ ಮಾಡಿರುವ ಇಲಾಖೆ, ಒಟ್ಟು ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಹೊಸ 8 ಪ್ರಕರಣಗಳ ಪೈಕಿ ಕಲಬುರಗಿ ಜಿಲ್ಲೆಯೊಂದರಲ್ಲೇ 6 ಪ್ರಕರಣ ಪತ್ತೆಯಾಗಿದೆ. ಉಳಿದಂತೆ ಗದಗ 1, ಹಾಗು ಬೆಂಗಳೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಕಲಬುರಗಿಯ 425ನೇ ರೋಗಿ ಸಂಪರ್ಕದಲ್ಲಿದ್ದ ಆರು ಜನರಿಗೆ ಕೊವಿಡ್ ಸೋಂಕು ಹರಡಿರುವುದು ಖಚಿತವಾಗಿದೆ. ಸೋಮವಾರ ರಾತ್ರಿಯಷ್ಟೇ ಕಲಬುರಗಿ ಜಿಲ್ಲೆಯ 57 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.
ರಾಜ್ಯದಲ್ಲಿ 198 ಜನರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 20 ಜನರ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ. 232 ಸೋಂಕಿತರಲ್ಲಿ ಗರ್ಭಿಣಿ ಸೇರಿದಂತೆ 227 ಜನರ ಆರೋಗ್ಯ ಸ್ಥಿರವಾಗಿದೆ ಹಾಗೂ 5 ಸೋಂಕಿತರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.