ಬೀಜಿಂಗ್, ಎ.28 (Daijiworld News/MB) : ಚೀನಾದ ಗುವಾಂಗ್ಝೌನ ವಾಂಡ್ಫೊ ಬಯೋಟೆಕ್ ಲಿಮಿಟೆಡ್ ಮತ್ತು ಝುವಾಹಿ ಲಿವ್ಝೋನ್ ಡಯಾಗ್ನಸ್ಟಿಕ್ಸ್ ಇಂಕ್ನಿಂದ ಭಾರತಕ್ಕೆ ಆಮದು ಮಾಡಲಾದ ಕೊರೊನಾ ಪತ್ತೆಹಚ್ಚಲು ಬಳಸಲಾಗುವ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ಗಳಲ್ಲಿ ದೋಷ ಕಂಡು ಬಂದ ಕಾರಣದಿಂದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲಾ ರಾಜ್ಯಗಳಿಗೆ ಚೀನಾದ ಕಿಟ್ಗಳನ್ನು ಬಳಸಬೇಡಿ ಎಂದು ಸೂಚಿಸಿದ್ದು ಇದರಿಂದಾಗಿ ಚೀನಾ ಸಿಡಿಮಿಡಿಗೊಂಡಿದೆ.

ಚೀನಾದಿಂದ ಆಮದು ಮಾಡಲಾದ ಕಿಟ್ಗಳಲ್ಲಿ ನಿಖರತೆಯ ತೊಂದರೆ ಇದೆ ಎಂಬ ಕಾರಣದಿಂದಾಗಿ ಅವುಗಳನ್ನು ಬಳಸದೆ ವಾಪಾಸ್ ಕಳುಹಿಸಿ ಎಂದು ಐಸಿಎಂಆರ್ ತಿಳಿಸಿತ್ತು.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್, ಚೀನಾ ಉತ್ಪನ್ನಗಳನ್ನು ಅನುಮಾನದಿಂದ ನೋಡುವುದು, ದೋಷದಿಂದ ಕೂಡಿದೆ ಎಂದು ಹೇಳುವುದು ಬೇಜವಬ್ದಾರಿಯ ವರ್ತನೆ ಎಂದು ಹೇಳಿದೆ.
ಟೆಸ್ಟ್ ಕಿಟ್ಗಳನ್ನು ಉಪಯೋಗ ಮಾಡುವಲ್ಲಿ ಅಥವಾ ಸಾಗಾಟ ಮಾಡುವಲ್ಲಿ ಸರ್ಕಾರ ಸೂಚಿಸಿದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣದಿಂದಾಗಿ ಈ ತೊಂದರೆ ಉಂಟಾಗಿರಬಹುದು ಎಂದು ತನ್ನ ಆರೋಪದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿ ರೋಂಗ್ ಭಾರತವು ಚೀನಾದ ಸದ್ಭಾವನೆ, ವಿಧೇಯತೆಯನ್ನು ಗುರುತು ಮಾಡಬಹುದು, ಈ ಬಗ್ಗೆ ಮಾತುಕತೆ ನಡೆಸಿ ವಾಸ್ತವತೆಯನ್ನು ಗಂಭೀರವಾಗಿ ಅರಿತು ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಹೇಳಿದ್ದಾರೆ.
ಇನ್ನು ಈ ಎರಡು ಕಂಪೆನಿಗಳು ಈ ಕಿಟ್ಗಳಿಗಾಗಿ ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನ ಆಡಳಿತದ ಪ್ರಮಾಣಪತ್ರ ಪಡೆಯಲಾಗಿದೆ. ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಈ ಕಿಟ್ಗಳನ್ನು ಬಳಸುತ್ತಿದೆ. ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದೆ.